ಅನಾರೋಗ್ಯಕ್ಕೀಡಾಗಿದ್ದ ಹೆಚ್.ಡಿ. ಕುಮಾರಸ್ವಾಮಿಯವರು ತಿಂಗಳು ಕಾಲ ವಿಶ್ರಾಂತಿಯಲ್ಲಿದ್ದರು. ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ನ.1 ರಿಂದ ರಾಜ್ಯ ಪ್ರವಾಸ ಪ್ರಾರಂಭಿಸಲಿದ್ದಾರೆ. ವಯಸ್ಸಿನ ಕಾರಣದಿಂದಾಗಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ಪ್ರಚಾರ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲು ಸಾಧ್ಯವಾಗದಿರುವ ಕಾರಣ ಇದೀಗ ಕುಮಾರಸ್ವಾಮಿಯವರೇ ಪಕ್ಷದ ಸ್ಟಾರ್ ಪ್ರಚಾರಕರಾಗಿ ತೊಡಗಿಕೊಳ್ಳಬೇಕಾಗಿದೆ. ಹೀಗಾಗಿ ಕುಮಾರಸ್ವಾಮಿಯವರ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೈಟೆಕ್ ಬಸ್ ವೊಂದನ್ನು ಸಿದ್ಧಪಡಿಸಲಾಗಿದೆ.
ರೂ.1 ಕೋಟಿ ವೆಚ್ಚದಲ್ಲಿ ಈ ಹೈಟೆಕ್ ಬಸ್ ನ್ನು ಸಿದ್ಧಪಡಿಸಲಾಗಿದ್ದು, ತಮಿಳುನಾಡಿನ ಚೆನ್ನೈನಲ್ಲಿ ಬಸ್ ಸಿದ್ಧಗೊಳ್ಳುತ್ತಿದೆ. ಬಸ್ ಮಿನಿ ಮನೆಯಂತೆಯೇ ಇದ್ದು, ಹೈಡ್ರಾಲಿಕ್ ಬಳಸಿ ಲಿಫ್ಟ್ ಮೂಲಕ ಭಾಷಣ ಮಾಡಲು ಬಸ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ ಕೊಠಡಿ ಕೂಡ ಇದ್ದು, ಪ್ರತ್ಯೇತ ಶೌಚಗೃಹ, ಅಡುಗೆ ಮನೆಯಿದೆ. ಬಸ್ ನಲ್ಲಿ 5-6 ಜನರು ಕುಳಿತು ಚರ್ಚೆ ನಡೆಸಲು ಸಹ ಪ್ರತ್ಯೇಕ ವ್ಯವಸ್ಥೆಯಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಬಸ್ ಸಂಪೂರ್ಣವಾಗಿ ಸಿದ್ಧಗೊಂಡಿದ್ದು, ಹೈಟೆಕ್ ಬಸ್ ಭಾನುವಾರ ನಗರಕ್ಕೆ ಕಾಲಿಡಲಿದೆ. ಬಸ್'ನ್ನು ಕುಮಾರಸ್ವಾಮಿಯವರು ಪರಿಶೀಲನೆ ನಡೆಸಿದ ಬಳಿಕ ಯಾವುದಾದರೂ ಬದಲಾವಣೆಗಳನ್ನು ತರಬೇಕಿದ್ದರೆ, ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯ್ಯದ್ ಅಲ್ತಾಫ್ ಅವರು ಹೇಳಿದ್ದಾರೆ.
ಅಶೋಕ್ ಲೇಲ್ಯಾಂಡ್ ಅವರು ಬಸ್ ನ್ನು ತಯಾರಿಸುತ್ತಿದ್ದು, ಬಸ್ಸಿನ ವೆಚ್ಚ ರೂ.1 ಕೋಟಿಯಿದೆ. ಬಸ್ಸಿನಲ್ಲಿ ಹೈಡ್ರಾಲಿಕ್ ಲಿಫ್ಟ್ ಇದ್ದು, ಈ ಮೂಲಕ ಸಾರ್ವಜನಿಕರನ್ನು ಉದ್ದೇಶಿಸಿ ಕುಮಾರಸ್ವಾಮಿಯವರು ಸುಲಭವಾಗಿ ಭಾಷಣ ಮಾಡಬಹುದು. ನ.1 ರಿಂದ ಹೆಚ್.ಡಿ.ಕೆ ರಾಜ್ಯ ಪ್ರವಾಸ ಆರಂಭಗೊಳ್ಳಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಬಸ್ಸಿಗೆ ಪಕ್ಷದ ಹಸಿರು ಹಾಗೂ ಬಿಳಿ ಬಣ್ಣವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.