
ಬೆಂಗಳೂರು: ತುಂಬಿ ತುಳುಕುತ್ತಿರುವ ಕೆರೆಗಳು, ಮುಳುಗಿದ ರಸ್ತೆಗಳು, ಚಾಚಿಕೊಂಡಿರುವ ಮರಗಳು, ಟ್ರಾಫಿಕ್ ಜಾಮ್ ಗಳಲ್ಲಿ ಸಿಕ್ಕಿರುವ ವಾಹನಗಳು ಮತ್ತು ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ಹರಿಯುವ ನೀರು, ಅವ್ಯಾಹತ ಮಳೆ ನಗರದ ನಿವಾಸಿಗಳಿಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ.
ಪ್ರವಾಹದ ನೀರಿನ ಹರಿವು ಮತ್ತು ರಸ್ತೆಗಳ ತುಂಬೆಲ್ಲಾ ಕಸದ ರಾಶಿಗಳು ತುಂಬಿರುವುದು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ.
ನೀರು ತುಂಬಿಕೊಂಡ ರಸ್ತೆಗಳಲ್ಲಿನ ಹೊಂಡು-ಗುಂಡಿಗಳು ವಾಹನ ಸವಾರರಿಗೆ ಮೃತ್ಯುಕೂಪವಾಗಿದೆ. ಹಳೆ ಕಟ್ಟಡಗಳ ಗೋಡೆಗಳು ಕುಸಿದು ಬೀಳುವ ಭೀತಿ ಅಲ್ಲಲ್ಲಿ ಎದುರಾಗಿದೆ. ನಿನ್ನೆ ನಸುಕಿನ ಜಾವ 4 ಗಂಟೆ ಸುಮಾರಿಗೆ ಇನ್ಫೋಸಿಸ್ ಕ್ಯಾಂಪಸ್ ನ ಗೋಡೆಯ ಒಂದು ಭಾಗ ಕುಸಿದಿತ್ತು. ಈ ಗೋಡೆ ಕ್ಯಾಂಪಸ್ ನ ಗೇಟ್-6ನಲ್ಲಿದ್ದು ಇದು ವಾಹನ ಪಾರ್ಕಿಂಗ್ ಗೆ ಇರುವ ಜಾಗವಾಗಿದೆ. ಕಳೆದ ಹಲವು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ನೀರು ತುಂಬಿಕೊಂಡು ಗೋಡೆ ಕುಸಿದಿದ್ದು ಒಳಚರಂಡಿ ಒತ್ತುವರಿಯಿಂದಾಗಿ ಆಗಿದೆ ಎನ್ನುತ್ತಾರೆ ಈ ಪ್ರದೇಶದ ನಿವಾಸಿಗಳು.
ಇನ್ಫೋಸಿಸ್ ಗೆ ತಮ್ಮ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಿದ್ದ ನಾಗೇಶ್, ಒಳಚರಂಡಿಗೆ ಬಿಡಬೇಕಾದ ಜಾಗದಲ್ಲಿ ಕಂಪೌಂಡ್ ನಿರ್ಮಾಣ ಮಾಡಿದ ಇನ್ಫೋಸಿಸ್ ಕೇವಲ 3 ಅಡಿ ಅಗಲ ಜಾಗ ಮಾತ್ರ ಬಿಟ್ಟಿದೆ. ಇದರಿಂದ ಸುತ್ತಮುತ್ತ ಪ್ರದೇಶಗಳಲ್ಲಿ ನೀರು ನಿಲ್ಲುತ್ತದೆ. ಸುತ್ತಮುತ್ತಲ ಬೇರೆ ಕಟ್ಟಡಗಳಲ್ಲಿ ಕೂಡ ಇದರಿಂದ ಬಿರುಕು ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ.
ಕೊಣಪ್ಪನ ಅಗ್ರಹಾರ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀನಿವಾಸ್, ಇನ್ಫೋಸಿಸ್ ಕ್ಯಾಂಪಸ್ ಒಳಗೆ ಇರುವ ಒಳಚರಂಡಿಯನ್ನು ಒತ್ತುವರಿ ಮಾಡಲಾಗಿದೆ ಎನ್ನುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇನ್ಫೋಸಿಸ್, ಕಳೆದ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಇನ್ಫೋಸಿಸ್ ಕ್ಯಾಂಪಸ್ ನ ಗೋಡೆಯ ಸಣ್ಣ ಭಾಗ ಕುಸಿದು ಬಿದ್ದಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ, ಗೋಡೆಯ ರಿಪೇರಿ ಮಾಡಿಸುತ್ತಿದ್ದೇವೆ ಎಂದರು.
ಸಿಲ್ಕ್ ಬೋರ್ಡ್ ಜಂಕ್ಷನ್ ಹತ್ತಿರ ಮರೇನಹಳ್ಳಿ ರಸ್ತೆಯಲ್ಲಿ ಪ್ರವಾಹ ಉಂಟಾಗಿರುವುದರಿಂದ ಸಂಚಾರ ದಟ್ಟಣೆ ಅಧಿಕವಾಗಿದೆ. ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯ ಒಂದು ಭಾಗ ನಿರ್ಬಂಧಿಸಲಾಗಿರುವುದರಿಂದ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಇದೇ ಪ್ರದೇಶದಲ್ಲಿನ ಜಿಎಸ್ ಟಿ ಕ್ವಾಟ್ರಸ್ ನ ಮನೆಗಳ ಕೆಳ ಅಂತಸ್ತಿಗೆ ನೀರು ನುಗ್ಗಿವೆ.
ಈ ಕಾಲೊನಿಯಲ್ಲಿ ವಾಸಿಸುತ್ತಿರುವ ಲಕ್ಷ್ಣಣ್ ಎಂಬುವವರು, ಕಳೆದೊಂದು ತಿಂಗಳಲ್ಲಿ ನಾಲ್ಕನೇ ಸಲ ಮನೆಯೊಳಗೆ ನೀರು ನುಗ್ಗುತ್ತಿದೆ. ಸಿಲ್ಕ್ ಬೋರ್ಡ್ ಹತ್ತಿರ ಒಳ ಚರಂಡಿಯಿಂದ ನೀರು ಹರಿಯುತ್ತಿದ್ದು ಹೆಚ್ಚಿನ ಚರಂಡಿಗಳು ತಡೆದಿವೆ ಎನ್ನುತ್ತಾರೆ.
ವಿದ್ಯುತ್ ಮೀಟರ್ ಕೆಳ ಮಹಡಿಯಲ್ಲಿರುವುದರಿಂದ ವಿದ್ಯುತ್ ಇಲ್ಲವಾಗಿದೆ. ವಿದ್ಯುತ್ ಇಲ್ಲದೆ ಪಂಪ್ ಸ್ವಿಚ್ ಹಾಕಲಾಗದೆ ನೀರು ಇಲ್ಲವಾಗಿದೆಯ ಸಾಯಂಕಾಲ 5 ಗಂಟೆಗೆ ನೀರು ಮನೆಯೊಳಗೆ ನುಗ್ಗಿತ್ತು ಎನ್ನುತ್ತಾರೆ ಲಕ್ಷ್ಮಣ್.
Advertisement