ರಸ್ತೆಗೆ ಹಾಕುತ್ತಿದ್ದ ನೀರು ಆಕಸ್ಮಿಕವಾಗಿ ಮೈಮೇಲೆ ಬಿದ್ದಿದ್ದಕ್ಕೆ ವ್ಯಕ್ತಿಯ ಹತ್ಯೆ!

ರಸ್ತೆಗೆ ಹಾಕುತ್ತಿದ್ದ ನೀರು ಬೈಕ್ ಸವಾರನ ಮೈ ಮೇಲೆ ಬಿತ್ತಿ ಎಂಬ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಕುರುಬರಹಳ್ಳಿಯಲ್ಲಿ ಭಾನುವಾರ ನಸುಕಿನ ಜಾವ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ರಸ್ತೆಗೆ ಹಾಕುತ್ತಿದ್ದ ನೀರು ಬೈಕ್ ಸವಾರನ ಮೈಮೇಲೆ ಬಿತ್ತು ಎಂಬ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಕುರುಬರಹಳ್ಳಿಯಲ್ಲಿ ಭಾನುವಾರ ನಸುಕಿನ ಜಾವ ನಡೆದಿದೆ. 
ಕುರುಬರಹಳ್ಳಿಯ ಜೆ.ಸಿ.ನಗರ ನಿವಾಸಿ ಮಂಜುನಾಥ್ (45) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಘಟನೆಯಲ್ಲಿ ಮಂಜುನಾಥ್ ಅವರ ಪತ್ನಿ ಗಂಗಮ್ಮ ಹಾಗೂ ಪುತ್ರ ಮನೋಜ್ ಇಬ್ಬರಿಗೂ ಆರೋಪಿ ಇರಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಹತ್ಯೆ ಮಾಡಿದ ಬಳಿಕ ಅದೇ ಚಾಕುವಿನಲ್ಲಿ ಹೊಟ್ಟೆಗೆ ಇರಿದುಕೊಂಡು ಆರೋಪಿ, ರಾಜಾಜಿನಗರ ಆರೋಪಿ ಆಕಾಶ್ (24) ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ ಗುಣಮುಖನಾದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. 
ಮಂಜುನಾಥ್ ಜೆ.ಸಿ.ನಗರ 7ನೇ ಮುಖ್ಯರಸ್ತೆಯಲ್ಲಿ ಸಾಯಿ ಹೆಸರಿನ ಕಾಂಡಿಮೆಂಟ್ಸ್ ಇಟ್ಟುಕೊಂಡಿದ್ದು, ಮೊದಲ ಮಹಡಿಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು. ಭಾನುವಾರ ಬೆಳಿಗ್ಗೆ 5.15ರ ನಸುಕಿನಲ್ಲಿ ಕಾಂಡಿಮೆಂಟ್ ತೆರೆಯಲು ಬಂದಿದ್ದ ಮಂಜುನಾಥ್ ಮೊದಲಿಗೆ ಅಂಗಡಿ ಮುಂದೆ ನೀರು ಹಾಯಿಸಿ ಶುಚಿಗೊಳಿಸುತ್ತಿದ್ದರು. ಈ ವೇಳೆ ಅಂಗಡಿ ಮುಂದೆ ಆಕಾಶ್ ಬೈಕ್ ನಲ್ಲಿ ಬಂದಿದ್ದು, ಕಾಣದೇ ಮಂಜುನಾಥ್ ಅವರು ಆಕಾಶ್ ಮೇಲೆ ನೀರು ಹಾಕಿದ್ದಾರೆ. 
ಇದರಿಂದ ಆಕಾಶ್ ಬೈಕ್ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದಿದ್ದಿದ್ದಾರೆ. ಈ ಬಗ್ಗೆ ಅಂಗಡಿ ಮಾಲೀಕನನ್ನು ಆಕಾಶ್ ಪ್ರಶ್ನಿಸಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಮಿಲಾಯಿಸಿದ್ದರು. ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಮಂಜುನಾಥ್ ಪುತ್ರ ಹಾಗೂ ಸ್ಥಳೀಯರು ಜಗಳ ಬಿಡಿಸಿ, ಆಕಾಶ್ ನನ್ನು ಸ್ಥಳದಿಂದ ಕಳುಹಿಸಿದ್ದರು. 
ಜಗಳವಾಡುವ ಸಮಯದಲ್ಲಿ ಆಕಾಶ್ ಹೆಲ್ಮೆಟ್'ನ್ನು ಕಾಂಡಿಮೆಂಟ್ಸ್ ಬಳಿಯೇ ಬಿಟ್ಟು ಬಂದಿದ್ದ. ದಾರಿ ಮಧ್ಯೆ ಹೆಲ್ಮೆಟ್ ಬಿಟ್ಟಿರುವ ಬಗ್ಗೆ ನೆನಪು ಮಾಡಿಕೊಂಡು ಆಕಾಶ್ ಪುನಃ ಅಂಗಡಿ ಬಳಿ ಬಂದಿದ್ದ. ಆಕಾಶ್ ಹಿಂದಿರುಗಿರುವುದನ್ನು ಕಂಡು ಜಗಳ ಮಾಡಲು ಬಂದಿರಬಹುದು ಎಂದು ಭಾವಿಸಿದ ಮಂಜುನಾಥ್ ಆತನಿಗೆ ಬೆದರಿಸಿದ್ದರು. ಇದರಿಂದ ಆಕ್ರೋಶಗೊಂಡ ಆಕಾಶ್ ಪುನಃ ಜಗಳ ಮಾಡಲು ಮುಂದಾಗಿದ್ದ. ಮತ್ತೆ ಇಬ್ಬರು ಕೈ ಮಿಲಾಯಿಸಿಕೊಂಡಿದ್ದರು. ಬಳಿಕ ಸ್ಥಳಕ್ಕೆ ಬಂದ ಮಂಜುನಾಥ್ ಅವರ ಪುತ್ರ ಆಕಾಶ್ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಆರೋಪಿ ಚಾಕುವಿನಿಂದ ಮಂಜುನಾಥ್ ಅವರ ಎದೆಗೆ ಇರಿದಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಂಜುನಾಥ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com