ಬೆಂಗಳೂರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್(ಬಿಇಎಂಎಲ್) ತಾನು ನಿರ್ಮಿಸಿರುವ ಮೂರು ಹೊಸ ಬೋಗಿಗಳನ್ನು ಬುಧವಾರ ನಮ್ಮ ಮೆಟ್ರೊಗೆ ಹಸ್ತಾಂತರಿಸಿದೆ.
ಇಂದು ಬೆಳಗ್ಗೆ ಹೊಸ ತಿಪ್ಪಸಂದ್ರದ ಬಿಇಎಂಎಲ್ ಕಚೇರಿಯಲ್ಲಿ ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವ ಅನಂತ್ ಕುಮಾರ್, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ ಕೆ ಹೋಟ ಅವರು ಬಿಎಂಆರ್‌ಸಿಎಲ್ ಗೆ ಮೂರು ಹೊಸ ಬೋಗಿಗಳನ್ನು ಹಸ್ತಾಂತರಿಸಿದರು,
ಬಿಇಎಂಎಲ್ ಹಸ್ತಾಂತರಿಸಿರುವ ಈ ಮೂರು ಬೋಗಿಗಳ ಪರೀಕ್ಷಾರ್ಥ ಸಂಚಾರ ನಡೆಸಿದ ಬಳಿಕ 6 ಬೋಗಿಯ ಮೆಟ್ರೋ ರೈಲು ಸೇವೆಗೆ ಮುಕ್ತವಾಗಲಿದೆ ಎಂದು ಜಾರ್ಜ್ ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೂರು ಹೊಸ ಬೋಗಿಗಳನ್ನು ಅಳವಡಿಸಲು ಬಿಎಂಆರ್ ಸಿಎಲ್ ಕ್ರಮ ಕೈಗೊಂಡಿದ್ದು, 6 ಬೋಗಿಯ ಮೆಟ್ರೋ ರೈಲು ಸೇವೆಗೆ ಮುಕ್ತವಾದ ಬಳಿಕ ಮೊದಲ ಬೋಗಿ ಮಹಿಳೆಯರಿಗೆ ಮೀಸಲು ಇರುತ್ತದೆ. ಮಾರ್ಚ್ 1ರಿಂದ ಪ್ರಾಯೋಗಿಕವಾಗಿ ಇದಕ್ಕೆ ಚಾಲನೆ ದೊರೆಯಲಿದೆ.