

ಬೆಂಗಳೂರು: ಹತ್ತನೇ ತರಗತಿಯಲ್ಲಿ ಕಳಪೆ ಫಲಿತಾಂಶ ಬಂದ ವಿದ್ಯಾರ್ಥಿಗಳಿರುವ ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರ ವೇತನವನ್ನು ತಡೆಹಿಡಿಯುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ.
ಕಳೆದ ಐದು ವರ್ಷಗಳಲ್ಲಿ ಹತ್ತನೇ ತರಗತಿಯಲ್ಲಿ ಜಿಲ್ಲಾವಾರು ಫಲಿತಾಂಶದಲ್ಲಿ ಸರಾಸರಿಗಿಂತ ಕಡಿಮೆ ಫಲಿತಾಂಶ ಲಭಿಸಿದ ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರ ಜೂನ್ ತಿಂಗಳ ವೇತನವನ್ನು ತಡೆಹಿಡಿಯುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿ ಸಾರ್ವಜನಿಕ ನಿರ್ದೇಶನದ ಉಪ ನಿರ್ದೇಶಕರಿಗೆ ವರದಿ ಸಲ್ಲಿಸುವಂತೆ ಹೇಳಿತ್ತು. ಇಲಾಖೆಯ ಈ ಕ್ರಮಕ್ಕೆ ಶಿಕ್ಷಕ ವೃಂದದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನಲೆಯಲ್ಲಿ ಕೊನೆಗೂ ಪ್ರತಿಭಟನೆಗೆ ಮಣಿದಿರುವ ರಾಜ್ಯ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. ಶಿಕ್ಷಕರ ವೇತನವನ್ನು ತಡೆಹಿಡಿಯುವ ಬದಲು ಕರ್ನಾಟಕ ಕೇಡರ್ ಮತ್ತು ಸೇವಾ ನೇಮಕಾತಿ ನಿಯಮ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಇದೇ ವಿಷಯ ನಿನ್ನೆ ವಿಧಾನಪರಿಷತ್ ಕಲಾಪದಲ್ಲಿ ಚರ್ಚೆಗೆ ಬಂದಿತು. ಅದರಲ್ಲಿ ಅನುದಾನಿತ ಶಾಲೆಗಳಿಗೆ ವಿಧಿಸಲಾಗಿದ್ದ ಹಲವು ಷರತ್ತುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಲಾಯಿತು. ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸದೆ ಆದೇಶವನ್ನು ತರಾತುರಿಯಲ್ಲಿ ಹೊರಡಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ ಮತ್ತು ಎಸ್ ವಿ ಸಂಕನೂರ ಸಭಾಪತಿಗಳ ಗಮನಕ್ಕೆ ತಂದರು.