ನಗರದ ಅಮೃತಹಳ್ಳಿಯ ಬೆಥಲ್ ಎಜಿ ಚರ್ಚ್ ಸಮೀಪದ ಚಿರಂಜೀವಿ ಲೇಔಟ್ ನಲ್ಲಿ ಪತ್ತೆಯಾಗಿದ್ದ 3 ವರ್ಷದ ಅನಾಥ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಇದೀಗ ಬೆಳಕಿಗೆ ಬಂದಿದ್ದು, ಈ ಸಂಬಂಧ ಅಮೃತಹಳ್ಳಿ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ...
ಬೆಂಗಳೂರು: ನಗರದ ಅಮೃತಹಳ್ಳಿಯ ಬೆಥಲ್ ಎಜಿ ಚರ್ಚ್ ಸಮೀಪದ ಚಿರಂಜೀವಿ ಲೇಔಟ್ ನಲ್ಲಿ ಪತ್ತೆಯಾಗಿದ್ದ 3 ವರ್ಷದ ಅನಾಥ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಇದೀಗ ಬೆಳಕಿಗೆ ಬಂದಿದ್ದು, ಈ ಸಂಬಂಧ ಅಮೃತಹಳ್ಳಿ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೆಥಲ್ ಎಜಿ ಚರ್ಚ್ ಬಳಿ ಗುರುವಾರ ಬೆಳಿಗ್ಗೆ 6.30ರ ಸುಮಾರಿಗೆ ಅನಾಥ ಬಾಲಕಿಯೊಬ್ಬಳು ಮಲಗಿದ್ದಳು. ಇದನ್ನು ಕಂಡ ಸ್ಥಳೀಯರು ಅಮೃತಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯನ್ನು ರಕ್ಷಣೆ ಮಾಡಿ ಆಕೆಯ ಪೋಷಕರ ಬಗ್ಗೆ ಪ್ರಶ್ನಿಸಿದ್ದರು,
ಬಾಲಕಿ ತನ್ನ ಪೋಷಕರ ಬಗ್ಗೆ ಸೂಕ್ತ ಮಾಹಿತಿ ನೀಡದ ಹಿನ್ನಲೆಯಲ್ಲಿ ಅದೇ ದಿನ ಸಂಜೆ ಹೊಸೂರು ಮುಖ್ಯರಸ್ತೆಯಲ್ಲಿನ ಬಾಲಮಂದಿರಕ್ಕೆ ಬಾಲಕಿಯನ್ನು ಸೇರ್ಪಡೆಗೊಳಿಸಿದ್ದರು.
ಈ ಸಂಬಂಧ ಅಮೃತಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 317ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಬಾಲ ಮಂದಿರದ ಅಧಿಕಾರಿಗಳು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಬಾಲಕಿಯ ವೈದ್ಯಕೀಯ ತಪಾಸಣೆ ನಡೆಸಿದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪತ್ತೆಯಾಗಿದೆ.
ಪ್ರಸ್ತುತ ಬಾಲಕಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿದುಬಂದಿದೆ. ಆಕೆ ಗುಣಮುಖಳಾದ ಬಳಿಕ ಪೋಷಕರ ಬಗ್ಗೆ ಮಾಹಿತಿ ಪಡೆಯಲು ಯತ್ನ ನಡೆಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಬಾಲಕಿಯನ್ನು ಆರೋಪಿಗಳೇ ಕರೆತಂದಿದ್ದರೇ ಅಥವಾ ನೆರೆಹೊರೆ ಪ್ರದೇಶದಿಂದ ಬಾಲಕಿ ನಾಪತ್ತೆಯಾಗಿದ್ದಳೋ ಎಂಬುದು ಈ ವರೆಗೂ ಸ್ಪಷ್ಟವಾಗಿಲ್ಲ. ಬಾಲಕಿಯ ಪೋಷಕರಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.