ರಾಜ್ಯ

ಬಿನ್ನಿಪೇಟೆ ವಾರ್ಡ್ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾಗೆ ಗೆಲುವು

ಬಿನ್ನಿಪೇಟೆ ವಾರ್ಡ್ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾಗೆ ಗೆಲುವು
ಸಂಗ್ರಹ ಚಿತ್ರ
Published On :
ಬೆಂಗಳೂರು: ಬಿನ್ನಿಪೇಟೆ ಪ್ರದೇಶದ ಬಿಬಿಎಂಪಿ ವಾರ್ಡ್‌ ನಂಬರ್ 121ರ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ಗೆಲುವಿನ ನಗೆ ಬೀರಿದ್ದಾರೆ. 
ವಾರ್ಡ್‌ನ ಸದಸ್ಯರಾಗಿದ್ದ ಮಹದೇವಮ್ಮ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಜೂನ್ 18ರಂದು ಚುನಾವಣೆ ನಡೆದಿತ್ತು. ಇಂದು ಅದರ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾ ಒಟ್ಟು 1,939 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಐಶ್ವರ್ಯಾ ಅವರು ಮಹದೇವಮ್ಮ ಅವರ ಪುತ್ರಿಯಾಗಿದ್ದು, ತಮ್ಮ ತಾಯಿ ನಿಧನದಿಂದ ತೆರವಾಗಿದ್ದ ಸ್ಥಾನದಲ್ಲಿ ಅವರೇ ಸ್ಪರ್ಧಿಸಿದ್ದರು. ಇನ್ನು ಬಿಜೆಪಿ ಅಭ್ಯರ್ಥಿ ಚಾಮುಂಡೇಶ್ವರಿ ಜಿ ಮತ್ತು ವಿದ್ಯಾಶಶಿಕುಮಾರ್ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು.
ಈ ವಾರ್ಡ್ ನಲ್ಲಿ ಒಟ್ಟು 34,582 ಮತದಾರರಿದ್ದು, 17,746 ಪುರುಷ ಮತ್ತು 16826 ಮಹಿಳಾ ಮತದಾರರಿದ್ದಾರೆ. ಈ ಪೈಕಿ ಜೂನ್ 18ರ ಚುನಾವಣೆಯಲ್ಲಿ ಶೇ.43.54ರಷ್ಟು ಮತದಾನವಾಗಿತ್ತು. ಇಂದು ಪ್ರಕಟಗೊಂಡ ಫಲಿತಾಂಶದಲ್ಲಿ ಐಶ್ವರ್ಯಾ ಪರ ಒಟ್ಟು 7188 ಮತಗಳು ಚಲಾವಣೆಯಾಗಿದೆ. ಅಂತೆಯೇ ಇಲ್ಲಿ ನೋಟಾಗೆ 159 ಮತಗಳು ಚಲಾವಣೆಯಾಗಿದ್ದು, ಒಟ್ಟು 15,051 ಮತಗಳು ಚಲಾವಣೆಯಾಗಿದೆ.
ಮಹದೇವಮ್ಮ ಮೊದಲು ಕಾಂಗ್ರೆಸ್‌ ನಿಂದ ಸ್ಪರ್ಧಿಸಿದ್ದರು. ಆದರೆ ಐಶ್ವರ್ಯಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ.  ಕಾಂಗ್ರೆಸ್ ವಿದ್ಯಾ ಶಶಿಕುಮಾರ್‌ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದಾಗ ಐಶ್ವರ್ಯಾ ಜೆಡಿಎಸ್‌ನಿಂದ ಸ್ಪರ್ಧೆಗಿಳಿದಿದ್ದರು.
ದಿನೇಶ್ ಗುಂಡೂರಾವ್ ವಿರುದ್ಧ ಐಶ್ವರ್ಯಾ ಆಕ್ರೋಶ
ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ನೂತನ ಕಾರ್ಪೊರೇಟರ್ ಐಶ್ವರ್ಯಾ ತಮ್ಮ ತಾಯಿ ಮಹದೇವಮ್ಮ ಅವರನ್ನು ನೆನೆದು ಕಣ್ಣೀರಿಟ್ಟರು. ಈ ವೇಳೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದಿನೇಶ್ ಗುಂಡೂರಾವ್ ವಿರುದ್ದ ಕಿಡಿಕಾರಿದ ಅವರು, 'ದಿನೇಶ್ ಗುಂಡೂರಾವ್ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.  ಹಣ ಹಂಚಿದರೆ ಮತ ಹಾಕುತ್ತಾರೆ ಎನ್ನುವ ಅವರ ಭಾವನೆಗೆ ಜನ ಸರಿಯಾದ ಉತ್ತರ ನೀಡಿದ್ದಾರೆ. ಬಿನ್ನಿಪೇಟೆ ಕಾಂಗ್ರೆಸ್ ಭದ್ರಕೋಟೆ ಅಂತ ಅವರೇ ಹೇಳಿಕೊಳ್ಳುತ್ತಿದ್ದರು. ಬಿನ್ನಿಪೇಟೆ ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಬಿನ್ನಿಪೇಟೆ ಅನ್ನುತ್ತಿದ್ದರು. ಈ ಫಲಿತಾಂಶ ಅವರಿಗೆ ತಕ್ಕ ಪಾಠ ಕಲಿಸಿದೆ. ಇದು ಜನರ ಗೆಲುವು, ಬಿನ್ನಿಪೇಟೆಯಲ್ಲಿ ಕಾಂಗ್ರೆಸ್ ಇದ್ದಿದ್ದೇ ನಮ್ಮ ಅಪ್ಪ ಬಿಟಿಎಸ್ ನಾಗರಾಜ್ ಅವರಿಂದ. ಇನ್ನಾದರೂ ಅವರು ಇದು ಕಾಂಗ್ರೆಸ್ ಕೋಟೆ ಎನ್ನುವುದನ್ನು ಬಿಡಬೇಕು' ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.