

ಬೆಂಗಳೂರು: ನಮ್ಮ ಮೆಟ್ರೋ ರೈಲು ನೌಕರರು ಇದೇ 22 ರಿಂದ ಅನಿರ್ಧಿಷ್ಠಾವಧಿ ಮುಷ್ಕರ ನೆಡಸಲು ಉದ್ದೇಶಿಸಿರುವುದರಿಂದ ಎಸ್ಮಾ ಮೇಲಿನ ತಡೆಯಾಜ್ಞೆ ತೆರವುಗೊಳಿಸುವಂತೆ ಬಿಎಂಆರ್ ಸಿಎಲ್ ಹೈಕೋರ್ಟ್ ಗೆ ಸಂವಾದಾತ್ಮಕ ಅರ್ಜಿ ಸಲ್ಲಿಸಿದೆ.
ನೌಕರರ ಮುಷ್ಕರದಿಂದ ನಗರದಲ್ಲಿನ ಸಾರಿಗೆ ವ್ಯವಸ್ಥೆ ದುರ್ಬಲಗೊಳ್ಳುವುದರಿಂದ ಪ್ರಯಾಣಿಕರು ತೀವ್ರ ರೀತಿಯ ತೊಂದರೆ ಎದುರಿಸುವಂತಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಎಸ್ಮಾ ಜಾರಿಗೆ ಸಂಬಂಧಿಸಿದಂತೆ ಕಾರಣ ತಿಳಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ನೌಕರರೊಂದಿಗೆ ರಾಜೀ ಮಾಡಿಕೊಳ್ಳಲಾಗಿತ್ತು. ಇದರ ಹೊರತಾಗಿ ಸರ್ಕಾರ ಮೇಲ್ವಿಚಾರಣೆಗಾಗಿ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಐವರು ನಿರ್ದೇಶಕರನ್ನು ನೇಮಕಗೊಳಿಸಿದೆ .ಬಿಎಂಆರ್ ಸಿಎಲ್ ನೌಕರರು ಯಾವುದೇ ಚರ್ಚೆ ಮಾಡದೆ, ರೈಲು ತಡೆಯುವ ಮೂಲಕ ಪ್ರಯಾಣಿಕರಿಗೆ ತೊಂದರೆ ಕೊಡಲು ನಿರ್ಧರಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಬಿಎಂಆರ್ ಸಿಎಲ್ ನೌಕರರ ಪರ ವಕೀಲರ ಆಕ್ಷೇಪಣೆಗೆ ಕಾಲಾವಕಾಶ ನೀಡಿ ನ್ಯಾಯಾಧೀಶ ಎಲ್. ನಾರಾಯಣಸ್ವಾಮಿ ಈ ಅರ್ಜಿ ವಿಚಾರಣೆಯನ್ನು ಇದೇ 20ರವರೆಗೆ ಮುಂದೂಡಿದ್ದಾರೆ.ಮುಂದಿನ ವಿಚಾರಣೆಯವರೆಗೂ ಎಸ್ಮಾ ಮೇಲಿನ ತಡೆಯಾಜ್ಞೆಯನ್ನು ನ್ಯಾಯಾಲಯ ವಿಸ್ತರಿಸಿದೆ.