ಕೆಲಸ ಮಾಡದ ಶಾಸಕನ ಸೋಲಿಸು; ಮತದಾರರಿಂದ ದೇವರಿಗೆ ಕೇಶಮುಂಡನ ಹರಕೆ!

ಕರ್ನಾಟಕ ವಿಧಾನಸಭಾ ಚುನಾವಣಾ ಕಣ ದಿನಗಳದಂತೆ ರಂಗೇರುತ್ತಿದ್ದು, ಅತ್ತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದರೆ, ಇತ್ತ ಕೆಲಸ ಮಾಡದ ಶಾಸಕರನ್ನು ಸೋಲಿಸು ಎಂದು ಮತದಾರರು ದೇವರಿಗೆ ಹರಕೆ ಕಟ್ಟುತ್ತಿದ್ದಾರೆ.
ಅಭ್ಯರ್ಥಿ ಸೋಲಿಗಾಗಿ ಕೇಶಮುಂಡನ
ಅಭ್ಯರ್ಥಿ ಸೋಲಿಗಾಗಿ ಕೇಶಮುಂಡನ
Updated on
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಕಣ ದಿನಗಳದಂತೆ ರಂಗೇರುತ್ತಿದ್ದು, ಅತ್ತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದರೆ, ಇತ್ತ ಕೆಲಸ ಮಾಡದ ಶಾಸಕರನ್ನು ಸೋಲಿಸು ಎಂದು ಮತದಾರರು ದೇವರಿಗೆ ಹರಕೆ ಕಟ್ಟುತ್ತಿದ್ದಾರೆ.
ಅರೆ..ಕೆಲಸ ಮಾಡದ ಅಭ್ಯರ್ಥಿ ವಿರುದ್ಧ ಮತದಾನ ಮಾಡಿದರೆ ಸಾಕಲ್ಲವೇ? ಎಂಬುದು ನಿಮ್ಮ ಪ್ರಶ್ನೆಯಾದರೆ, ನಾವು ಆತನ ವಿರುದ್ಧ ಮತದಾನ ಮಾಡಿದರೂ ಆತ ಗೆಲ್ಲುತೇನೆ ಎಂಬ ವಿಶ್ವಾಸದಲ್ಲಿದ್ದಾನೆ, ಹೀಗಾಗಿ ಆತನನ್ನು ಸೋಲಿಸುವಂತೆ ಹರಕೆ ಕಟ್ಟುತ್ತಿದ್ದೇವೆ ಎಂದು ಮತದಾರರೊಬ್ಬರು ಹೇಳಿದ್ದಾರೆ. 
ಹಾಲಿ ಕರ್ನಾಟಕ ವಿಧಾನ ಸಭೆ ಚುನಾವಣೆ ಕೇವಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ನಡುವಿನ ಜಿದ್ದಾಜಿದ್ದಿಯಾಗಿ ಉಳಿದಿಲ್ಲ. ಬದಲಿಗೆ ಅಭ್ಯರ್ಥಿಗಳ ಬೆಂಬಲಿಗರು, ಕಾರ್ಯಕರ್ತರು.. ಅಷ್ಟೇ ಏಕೆ ಮತದಾರರ ನಡುವಿನ ಜಿದ್ದಾಜಿದ್ದಿಯಾಗಿ ಮಾರ್ಪಟ್ಟಿದೆ. ಹಲವು ಕ್ಷೇತ್ರಗಳಲ್ಲಿ ವಿರೋಧಿ ಬಣದ ಅಭ್ಯರ್ಥಿ ಸೋಲಲಿ ಎಂದು ಕಾರ್ಯಕರ್ತರು, ಬೆಂಬಲಿಗರು ದೇವರಲ್ಲಿ ಹರಕೆ ಹೊತ್ತಿದ್ದರೆ, ಮತ್ತೆ ಕೆಲವು ಕ್ಷೇತ್ರಗಳಲ್ಲಿ ತಮ್ಮ ಕ್ಷೇತ್ರ ಶಾಸಕರ ವಿರುದ್ಧವೇ ಮತದಾರರು ದೇವರಲ್ಲಿ ಹರಕೆ ಹೊತ್ತಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡದ ಶಾಸಕ ಯಾವುದೇ ಕಾರಣಕ್ಕೂ ಈ ಬಾರಿ ಗೆಲ್ಲಬಾರದು ಎಂದು ದೇವರ ಮೊರೆ ಹೋಗುತ್ತಿದ್ದಾರೆ. ಕೆಲವರು ಕೇಶಮುಂಡನ ಮಾಡಿಸಿದರೆ, ಮತ್ತೆ ಕೆಲವರು ಧರ್ಮಸ್ಥಳಕ್ಕೆ ಬೆಂಗಳೂರಿನಿಂದ ಪಾದಯಾತ್ರೆ ಕೈಗೊಂಡು ಶಾಸಕನ ಸೋಲಿಸು ಎಂದು  ಹರಕೆ ಹೊತ್ತಿದ್ದಾರೆ. ಶುಕ್ರವಾರ ಇಂತಹುದೇ ಮತದಾರರ ತಂಡವೊಂದು ತಮ್ಮ ಕ್ಷೇತ್ರದ ಹಾಲಿ ಶಾಸಕನನ್ನು ಸೋಲಿಸುವಂತೆ ಕೇಶಮುಂಡನ ಮಾಡಿಸಿಕೊಂಡು ಸುದ್ದಿಗೆ ಗ್ರಾಸವಾಗಿದೆ. 
ಈ ಪೈಕಿ ಓರ್ವ ಮತದಾರರ ಮಾಧ್ಯಮಗಳೊಂದಿಗೆ ಮಾತನಾಡಿ ಕಳೆದ ಐದು ವರ್ಷದಲ್ಲಿ ನಾವು ನಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನೋಡಿಲ್ಲ. ಹೀಗಾಗಿ ಆ ಶಾಸಕ ಈ ಬಾರಿ ಸೋಲಬೇಕು. ಆದರೆ ನಾವು ಆತನಿಗೆ ಮತ ನೀಡದೇ ಇದ್ದರೂ ಆತ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದಾನೆ. ಇದೇ ಕಾರಣಕ್ಕೆ ಆತನ ಸೋಲಿಸು ಎಂದು ಶ್ರೀಮಂಜುನಾಥ ಸ್ವಾಮಿಗೆ ಹರಕೆ ಕಟ್ಟಿದ್ದೇವೆ. ಅಲ್ಲದೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುತ್ತಿದ್ದೇವೆ. ಆ ದೇವರು ಮಾತ್ರ ಈ ಶಾಸಕನಿಂದ ನಮ್ಮ ಕ್ಷೇತ್ರವನ್ನು ರಕ್ಷಿಸಲು ಸಾಧ್ಯ. ಹೀಗಾಗಿ ನಮ್ಮ 10 ಜನರ ತಂಡ ಕೇಶಮುಂಡನ ಮಾಡಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಮತ್ತೊಂದು ಕ್ಷೇತ್ರ ಮತದಾರರೂ ಕೂಡ ತಮ್ಮ ಶಾಸಕನ ವಿರುದ್ಧ ಇಂತಹುದೇ ಅಸಮಾಧಾನ ವ್ಯಕ್ತಪಡಿಸಿದ್ದು, ಸುಮಾರು ಒಂದು ಸಾವಿರ ಮಂದಿ ಆ ಶಾಸಕ ಸೋಲಬೇಕು ಎಂದು ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ನಾವು ಯಾವುದೇ ಕಾರಣಕ್ಕೂ ಆತನಿಗೆ ಮತ ಹಾಕುವುದಿಲ್ಲ. ಮತಹಾಕದೇ ಇರುವುದು ಮಾತ್ರ ಆತನನ್ನು ಸೋಲಸಲು ಸಾಧ್ಯವಿಲ್ಲ. ಇದಕ್ಕೆ ದೇವರ ಕೃಪೆ ಕೂಡ ಬೇಕು. ಇದಕ್ಕಾಗಿ ನಾವು ನಮ್ಮ ಗ್ರಾಮದೇವತೆ ಮುಂದೆ ಹರಕೆ ಹೊತ್ತಿದ್ದೇವೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರೊಬ್ಬರು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಮತ್ತೊಂದು ಕ್ಷೇತ್ರದಲ್ಲಿ ಮತದಾರರು ಹಾಲಿ ಶಾಸಕನ ಸೋಲಿಗಾಗಿ ಪ್ರಾರ್ಥಿಸಿ ಉಚಿತ ಆಹಾರ ಮತ್ತು ತಿರುಪತಿ ಲಡ್ಡು ವಿತರಣೆ ಮಾಡಿದರೆ, ಮತ್ತೊಂದು ಕ್ಷೇತ್ರದಲ್ಲಿ ನಿಂಬೆಹಣ್ಣಿನಲ್ಲಿ ದೇವರಿಗೆ ತುಪ್ಪದ ದೀಪ ಸಮರ್ಪಣೆ ಮಾಡಿದ್ದಾರೆ. ಅಂತೆಯೇ ಮತ್ತೆ ಕೆಲ ಮಹಿಳಾ ಮತದಾರರು ಮೈಸೂರಿನ ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದು, ಕೆಲಸ ಮಾಡದ ತಮ್ಮ ಕ್ಷೇತ್ರದ ಶಾಸಕ ಸೋತರೆ ಚಾಮುಂಡಿ ಬೆಟ್ಟ ಹತ್ತಿ ದರ್ಶನ ಪಡೆಯುವುದಾಗಿ ಹೇಳಿದ್ದಾರೆ. ಒಟ್ಟಾರೆ ಹಾಲಿ ಅಭ್ಯರ್ಥಿಗಳು ಗೆಲ್ಲಲು ಮತದಾರರು ಮಾತ್ರರಲ್ಲ ಇದೀಗ ಆ ದೇವರ ಕೃಪೆ ಕೂಡ ಅತ್ಯಗತ್ಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com