'ಸ್ವತಂತ್ರ, ಅತಂತ್ರ, ಕುತಂತ್ರ': ಯಾರ ಪಾಲಾಗಲಿದೆ ಕರ್ನಾಟಕ ವಿಧಾನಸಭೆ!

Published On :
ಬೆಂಗಳೂರು: ಮುಂದಿನ ಐದು ವರ್ಷಗಳ ಕಾಲ ರಾಜ್ಯದ ಅಧಿಕಾರದ ಚುಕ್ಕಾಣಿ ಯಾರು ಹಿಡಿಯಬೇಕು ಎಂಬ ಮತದಾರ ನೀಡಿರುವ ತೀರ್ಪು ಇಂದು ಪ್ರಕಟವಾಗಲಿದೆ.
ರಾಜ್ಯದ 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಲ್ಲಿ ಮೇ 12ರಂದು ನಡೆದಿದ್ದ ಮತದಾನದ ತೀರ್ಪು ಇಂದು ಪ್ರಕಟವಾಗಲಿದೆ. ಒಟ್ಟು 5.02 ಕೋಟಿ ಮತದಾರರ ಪೈಕಿ ಶೇ 72.36ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 2,622 ಅಭ್ಯರ್ಥಿಗಳ ಪೈಕಿ ಯಾರು ವಿಧಾನಸಭೆಯ ಮೆಟ್ಟಿಲು ಹತ್ತಲಿದ್ದಾರೆ ಎಂಬುದು ಇಂದಿನ ಮತ ಎಣಿಕೆಯಲ್ಲಿ ನಿರ್ಧಾರವಾಗಲಿದೆ.
ಇನ್ನು ಮತದಾನೋತ್ತರ ಸಮೀಕ್ಷೆಗಳ ಪೈಕಿ ಒಂದೆರಡು ಸಮೀಕ್ಷೆಗಳು ಕಾಂಗ್ರೆಸ್ ಅಥವಾ ಬಿಜೆಪಿ ಬಹುಮತ ಪಡೆಯಲಿವೆ ಎಂದು ಬಿಂಬಿಸಿವೆ. ಉಳಿದಂತೆ ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿವೆ. ಇದು ರಾಜಕೀಯ ನೇತಾರರಲ್ಲಿ ಸ್ವಲ್ಪ ಮಟ್ಟಿಗಿನ ತಲ್ಲಣ ಹುಟ್ಟಿಸಿದೆ. ಇದೇ ಕಾರಣಕ್ಕೆ ಇಂದಿನ ಫಲಿತಾಂಶ ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲದೇ ಮತದಾರರಿಗೂ ಮಹತ್ವದ್ದಾಗಿದೆ. ಇನ್ನು ದೇಶಾದ್ಯಂತ ಮೋದಿ ಅಲೆ ಮತ್ತು ಬಿಜೆಪಿ ಅಲೆಯಿದೆ ಎಂದು ಬೀಗುತ್ತಿರುವ ಬಿಜೆಪಿ ಪಕ್ಷಕ್ಕೆ ಕರ್ನಾಟಕ ಚುನಾವಣೆ ಕಬ್ಬಿಣದ ಕಡಲೆಯಾಗಿದ್ದು, ಈ ಮಹತ್ವದ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮತ್ತೊಂದು ಹೆಜ್ಜೆಯನ್ನಿಡಬೇಕು ಎಂದು ಬಿಜೆಪಿ ಹವಣಿಸುತ್ತಿದೆ.
ಮತ್ತೊಂದೆಡೆ ಕೇಂದ್ರ ಎನ್ ಡಿಎ ಸರ್ಕಾರದ ಪ್ರಭಾವವನ್ನು ತಗ್ಗಿಸುವ ನಿಟ್ಟಿನಲ್ಲಿ ಮತ್ತು ದೇಶದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರು ಕಾಂಗ್ರೆಸ್ ಪಕ್ಷಕ್ಕೂ ಈ ಚುನಾವಣಾ ಫಲಿತಾಂಶ ಪ್ರಮುಖವಾಗಿ ಪರಿಗಣಿಸಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಕರ್ನಾಟಕ ಚುನಾವಣೆಯನ್ನು ಸ್ವಪ್ರತಿಷ್ಠೆಯಾಗಿ ಪರಿಗಣಿ ಪ್ರಚಾರ ನಡೆಸಿತ್ತು. ಇನ್ನು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಪಾಲಿಗೆ ಇದು ಅಳಿವು-ಉಳಿವಿನ ಚುನಾವಣೆಯಾಗಿದ್ದು, 10 ವರ್ಷಗಳ ಹಿಂದೆ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪಾಲ್ಗೊಂಡಿತ್ತು. ಆ ಬಳಿಕ ನಡೆದ ಎರಡು ಚುನಾವಣೆಗಳಲ್ಲಿ ಜೆಡಿಎಸ್ ಸಾಧನೆ ಅಷ್ಟಕಷ್ಟೇ ಎಂಬಂತಿತ್ತು. ಈ ಬಾರಿ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರ ರಚನೆ ಮಾಡುವ ವಿಶ್ವಾಸದಲ್ಲಿದೆ.
ಇದೇ ಕಾರಣಕ್ಕೆ ರಾಜಕೀಯ ಪಕ್ಷಗಳ ಒಳಾಂಗಣದಲ್ಲಿ ತರಹೇವಾರಿ ಲೆಕ್ಕಾಚಾರ, ತರ್ಕ, ಹೊಂದಾಣಿಕೆಯ ಮುನ್ನಂದಾಜುಗಳು ಶುರುವಾಗಿವೆ. ಬೆಳಿಗ್ಗೆ 10ಗಂಟೆ ಹೊತ್ತಿಗೆ ಯಾವ ಪಕ್ಷ ಮುನ್ನಡೆ ಸಾಧಿಸಲಿದೆ ಎಂಬುದರ ಕುರುಹುಗಳು ಕಾಣಿಸಲಿವೆ. 11 ಗಂಟೆ ಸುಮಾರಿಗೆ ಗೆಲುವು ಯಾರ ಕಡೆಗಿದೆ ಎಂಬ ರೇಖೆಗಳು ಕಾಣಿಸಿಕೊಂಡರೆ, ಮಧ್ಯಾಹ್ನ 12 ಗಂಟೆಗೆ ಅಧಿಕಾರ ಯಾರ ಮಡಿಲಿಗೆ ಸೇರಲಿದೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.
ಅತಂತ್ರ–ಸ್ವತಂತ್ರವೋ ಎಂಬ ನಿಖರ ಮಾಹಿತಿಯೂ ಗೊತ್ತಾಗಲಿದೆ. 2 ಗಂಟೆ ಹೊತ್ತಿಗೆ 222 ಕ್ಷೇತ್ರಗಳಲ್ಲಿ ಯಾರು ಗೆದ್ದಿದ್ದಾರೆ ಎಂಬ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುCongressಕಾಂಗ್ರೆಸ್BengaluruJDSbjpಬಿಜೆಪಿಜೆಡಿಎಸ್Karnataka Assembly Electionಕರ್ನಾಟಕ ವಿಧಾನಸಭೆ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


