ಗಲಾಟೆ ಪ್ರಶ್ನಿಸಿದ್ದ ಪೇದೆ ಮೇಲೆ ಹಲ್ಲೆ: ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬೆನ್ನಟ್ಟಿ ಹಿಡಿದ ಪೊಲೀಸರು!

ಮಧ್ಯರಾತ್ರಿ ಕುಡಿದು ಗಲಾಟೆ ಮಾಡುತ್ತಿದ್ದುದ್ದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡು ಮುಖ್ಯ ಪೇದೆಯೊಬ್ಬರಿಗೆ ಬಿಯರ್ ಬಾಟಲ್'ನಿಂದ ಹಲ್ಲೆ ನಡೆಸಿ ಪುಂಡಾಟಿಗೆ ನಡೆಸಿದ್ದ ಆರೋಪಿಯನ್ನು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ...
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು
ಬೆಂಗಳೂರು: ಮಧ್ಯರಾತ್ರಿ ಕುಡಿದು ಗಲಾಟೆ ಮಾಡುತ್ತಿದ್ದುದ್ದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡು ಮುಖ್ಯ ಪೇದೆಯೊಬ್ಬರಿಗೆ ಬಿಯರ್ ಬಾಟಲ್'ನಿಂದ ಹಲ್ಲೆ ನಡೆಸಿ ಪುಂಡಾಟಿಕೆ ನಡೆಸಿದ್ದ ಆರೋಪಿಯನ್ನು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 
ಪ್ರಕರಣ ಸಂಬಂಧ ರಿಯಲ್ ಎಸ್ಟೇಟ್ ಏಜೆಂಟ್ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಹೆಚ್ಎಲ್ ಠಾಣಾ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ಹೆಚ್ಎಎಲ್ ಠಾಣೆಯ ಮುಖ್ಯ ಪೇದೆ ಸುಂದರ್ ರಾಜ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುನೇಕೊಳಲಿನ ಗುರುಪ್ರಸಾದ್, ಗೌತಮ್ ರೆಡ್ಡಿ, ಪ್ರಶಾಂತ್ ರೆಡ್ಡಿ ಹಾಗೂ ಸೂರ್ಯ ಪ್ರಕಾಶ್ ಎಂಬುವವರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. 
ನಾಲ್ವರು ಆರೋಪಿಗಳು ಬುಧವಾರ ರಾತ್ರಿ ಕುಂದಲಹಳ್ಳಿ ಗೇಟ್ ಸಮೀಪ ಕಾರು ನಿಲ್ಲಿಸಿಕೊಂಡು ಜೋರಾಗಿ ಸಂಗೀತ ಹಾಕಿಕೊಂಡು ಮದ್ಯ ಸೇವಿಸುತ್ತಿದ್ದರು. ಗಲಾಟೆಯಿಂದ ಸಿಡಿಮಿಡಿಗೊಂಡ ಸ್ಥಳೀಯ ನಿವಾಸಿಯೊಬ್ಬರು, ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. 
ರಾತ್ರಿ ಗಸ್ತಿನಲ್ಲಿದ್ದ ಸುಂದರ್ ರಾಜ್ ಹಾಗೂ ಪೇದೆ ಬಸವರಾಜ್, ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಹೋಗಿದ್ದರು. ಆಗ ಗಸ್ತು ಸಿಬ್ಬಂದಿ ಜೊತೆಗೆ ಜಗಳ ತೆಗೆದಿದ್ದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. 
ಈ ಹಂತದಲ್ಲಿ ಒಬ್ಬಾತ, ಬಿಯರ್ ಬಾಟಲಿಯಿಂದ ಸುಂದರ್ ರಾಜ್ ಅವರ ತೆಲೆಗೆ ಹೊಡೆದಿದ್ದ. ಕೂಡಲೇ ಸುಂದರ್ ರಾಜ್ ರಕ್ಷಣೆಗೆ ಧಾವಿಸಿದ ಪೇದೆ, ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ಪುಂಡರ ಪೈರಿ ಇಬ್ಬರನ್ನು ಸ್ಥಳೀಯರ ಸಹಾಯದಿಂದ ಇಬ್ಬರನ್ನು ಹಿಡಿದುಕೊಂಡಿದ್ದರು. ಇನ್ನಿಬ್ಬರು ಕಾರಿನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. 
ಆರೋಪಿಗಳ ಪತ್ತೆಗೆ ಮಾರತಳ್ಳಿ ಸೇತುವೆ ಬಳಿ ನಾಕಾ ಬಂದಿ ಹಾಕಲಾಗಿತ್ತು. ಅದೇ ಸಮಯಕ್ಕೆ ಆ ಮಾರ್ಗದಲ್ಲಿ ಬಂದ ಆರೋಪಿಗಳ ಕಾರನ್ನು ಸಿಬ್ಬಂದಿ ತಡೆಯಲು ಯತ್ನಿಸಿದ್ದಾರೆ. ಆಗ ಸಿಬ್ಬಂದಿ ಮೇಲೆಯೇ ಕಾರು ಹತ್ತಿಸಲು ಯತ್ನಿಸಿ ತಪ್ಪಿಸಿಕೊಂಡಿದ್ದರು. ಪೊಲೀಸರು ಬೆನ್ನುಹಟ್ಟಿದ್ದರಿಂದ ಆರೋಪಿಗಳು, ಹೆಚ್ಎಎಲ್ ವಿಮಾನ ನಿಲ್ದಾಣದ ತಡೆಗೋಡೆಗೆ ಕಾರು ಗುದ್ದಿಸಿದ್ದರು. ಕೆಟ್ಟು ನಿಂತ ಕಾರಿನಿಂದ ಇಳಿದು ಪರಾರಿಯಾಗುತ್ತಿದ್ದಾಗ ಅವರನ್ನು ಸಿಬ್ಬಂದಿ ಬಂಧನಕ್ಕೊಳಪಡಿಸಿದ್ದಾರೆಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹ್ಮದ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com