ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಟೆಕ್ಕಿಯೊಬ್ಬ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸೋಮವಾರ ನಡೆದಿದೆ.
ನೀಲಾದ್ರಿ ಲೇಔಟ್'ನ ರಾಘವೇಂದ್ರ ಪೇಯಿಂಗ್ ಗೆಸ್ಟ್ ಕಟ್ಟಡದ ನಿವಾಸಿ ಕೆ.ಸೇತುಕುಮಾರ್ (30) ಮೃತ ದುರ್ದೈವಿ. ಕೆಲಸ ಮುಗಿಸಿಕೊಂಡು ಸಂಜೆ 7ಕ್ಕೆ ಮೃತನ ಸ್ನೇಹಿತರು ಕೊಠಡಿಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ಸೇತುಕುಮಾರ್ ಮೂಲತಃ ತಮಿಳುನಾಡಿನವರಾಗಿದ್ದು, ಒಂದೂವರೆ ವರ್ಷದ ಹಿಂದೆ ನಗರಕ್ಕೆ ಬಂದಿದ್ದರು. ಬಳಿಕ ಸ್ನೇಹಿತರು ಹಾಗೂ ಸಾಲಗಾರರಿಂದ ಹಣವನ್ನು ಪಡೆದುಕೊಂಡಿದ್ದರು. ಕೆಲ ದಿನಗಳ ಬಳಿಕ ಸಾಲಗಾರರು ಹಣವನ್ನು ಕೇಳಲು ಆರಂಭಿಸಿದ್ದಾರೆ. ಇದರಿಂದ ಬೇಸತ್ತ ಸೇತುಕುಮಾರ್ ಪಿಜಿಯನ್ನು ಬದಲಿಸಿದ್ದಾರೆ.
ಬಳಿಕ ಸೇತುಕುಮಾರ್ ಅವರನ್ನು ಹುಡುಕಿದ ಸಾಲಗಾರರು ಮತ್ತೆ ಹಿಂಸೆ ನೀಡಲು ಆರಂಭಿಸಿದ್ದಾರೆ. ಸಾಲಗಾರರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.