

ಬೆಂಗಳೂರು: ಬಿಜೆಪಿ ನೇತೃತ್ವದ ನೂತನ ಸರ್ಕಾರದ ಚಳಿಗಾಲದ ಅಧಿವೇಶನ ಅಕ್ಟೋಬರ್ ನಲ್ಲಿ ಈ ವರ್ಷ ನಡೆಯಲಿದೆ. ಬೆಂಗಳೂರು ಮತ್ತು ಬೆಳಗಾವಿ ಎರಡೂ ಕಡೆ ಅಧಿವೇಶನ ನಡೆಯುವ ಸಾಧ್ಯತೆಯಿದೆ.
ಪ್ರತಿವರ್ಷ ಸಾಮಾನ್ಯವಾಗಿ ಚಳಿಗಾಲ ಅಧಿವೇಶನ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ. 2016 ಮತ್ತು 2017ರಲ್ಲಿ ಚಳಿಗಾಲ ಅಧಿವೇಶನ ನವೆಂಬರ್ ನಲ್ಲಿ ನಡೆಯಿತು. ಕಳೆದ ವರ್ಷ ಡಿಸೆಂಬರ್ ನಲ್ಲಿ ನೆರವೇರಿತ್ತು. ಈ ವರ್ಷ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಕ್ಟೋಬರ್ ತಿಂಗಳಲ್ಲಿಯೇ ಚಳಿಗಾಲ ಅಧಿವೇಶನ ನಡೆಸುವ ಸಾಧ್ಯತೆಯಿದೆ.
ಈ ಕುರಿತು ಮುಖ್ಯಮಂತ್ರಿಗಳ ಕಾರ್ಯಾಲಯ ಸಿಬ್ಬಂದಿ ಪ್ರತಿಕ್ರಿಯೆ ನೀಡಿದ್ದು, 2020-21ನೇ ಸಾಲಿನ ಬಜೆಟ್ ಮಂಡನೆಗೆ ಕೂಡ ಸರ್ಕಾರ ತಯಾರಿ ನಡೆಸುತ್ತಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಬಜೆಟ್ ಮಂಡಿಸಲಾಗುತ್ತಿದ್ದರೂ ಸಹ ಅದಕ್ಕೆ ತಯಾರಿ ಬೇಗನೆ ಆರಂಭವಾಗಲಿದೆ ಎಂದಿದ್ದಾರೆ.
ಚಳಿಗಾಲ ಅಧಿವೇಶನ ಕೆಲ ಸಮಯ ಬೆಳಗಾವಿಯ ಸುವರ್ಣ ಸೌಧದಲ್ಲಿ ಹಾಗೂ ಉಳಿದ ದಿನ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಯಲಿದೆ.