ಬೆಂಗಳೂರು: ಫೇಸ್ ಬುಕ್ ಅವರಿಬ್ಬರನ್ನು ಹತ್ತಿರ ತಂದಿತ್ತು, ಪ್ರೀತಿಸಿ ಒಟ್ಟಾಗಿ ಬದುಕಲು ಸಹಾಯ ಮಾಡಿತ್ತು, ಆದರೆ ಅದೇ ಪ್ರೀತಿ ಇಂದು ಇಬ್ಬರ ಜೀವಕ್ಕೆ, ಜೀವನಕ್ಕೆ ಎರವಾಗಿದೆ.
ಫೇಸ್ ಬುಕ್ ಮೂಲಕ ಪರಿಚಯವಾಗಿ, ಪರಿಚಯ ಸ್ನೇಹ, ಪ್ರೀತಿಗೆ ತಿರುಗಿ. ಇಬ್ಬರು ಜೊತೆಗೆ ವಾಸಿಸುತ್ತಿದ್ದರು. ಆದರೆ ಪತ್ನಿಯ ಅತಿಯಾದ ಫೇಸ್ ಬುಕ್ ಮೋಹ ಆಕೆ ಮತ್ತು ಮೂರು ತಿಂಗಳ ಮಗುವಿನ ಜೀವನವನ್ನು ಕಿತ್ತುಕೊಂಡಿದೆ.
ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಬಿಡದಿ ಮೂಲದ ರಾಜು ಪತ್ನಿ ಸುಷ್ಮಾ(24) ಹಾಗೂ ಮೂರು ತಿಂಗಳ ಮಗುವನ್ನು ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಜ್ಜಾಲ ಸಮೀಪದ ನೀಲಗಿರಿ ನಡುತೋಪಿನಲ್ಲಿ ಕೊಂದು, ಶವಗಳನ್ನು ಪೆಟ್ರೋಲ್ ಸುರಿದು ಸುಟ್ಟು ಪರಾರಿಯಾಗಿದ್ದ.
ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ಈತನನ್ನು ಬಂಧಿಸಿದ ಪೊಲೀಸರು, ಕೋರ್ಟ್ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಖಾಸಗಿ ಕಂಪೆನಿಯೊಂದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಸ್.ಕೆ.ರಾಜು ವಿಗೆ ಬೆಂಗಳೂರಿನ ದೊಡ್ಡಬಿದರಕಲ್ಲು ಎಂಬಲ್ಲಿ ವಾಸವಿದ್ದ ನಿವೃತ್ತ ಸರ್ಕಾರಿ ನೌಕರರೊಬ್ಬರ ಪುತ್ರಿ ಸುಷ್ಮಾ ಜತೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಇವರಿಬ್ಬರೂ ಬಾಡಿಗೆ ಮನೆಯಲ್ಲಿ ಜೊತೆಯಾಗಿ ವಾಸವಿದ್ದರು.
ಸುಷ್ಮಾ ಫೇಸ್‌ಬುಕ್ ಮೇಲೆ ಅತಿಯಾದ ಮೋಹ ಬೆಳೆಸಿಕೊಂಡಿದ್ದು, ಇದೇ ವಿಷಯವಾಗಿ ಇವರಿಬ್ಬರ ನಡುವೆ ಸದಾ ಜಗಳವಾಗುತ್ತಿತ್ತು. ಸುಷ್ಮಾಳ ಬಗ್ಗೆ ಅನುಮಾನವನ್ನೂ ಹೊಂದಿದ್ದ, ಆಕೆಗೆ ಹಲವು ಮಂದಿ ಫೇಸ್ ಬುಕ್ ಸ್ನೇಹಿತರಿದ್ದಾರೆ ಎಂದು ಶಂಕಿಸಿದ್ದ ಆರೋಪಿ ರಾಜು, ಆಕೆಯನ್ನು ಹತ್ಯೆ ಮಾಡಲು ನಿರ್ಧರಿಸಿದ್ದ.
ಕಳೆದ ಜ.20ರಂದು ಹೆಜ್ಜಾಲದಿಂದ ಮುತ್ತರಾಯನಪುರಕ್ಕೆ ಹೋಗುವ ರಸ್ತೆಯಲ್ಲಿನ ಹೆಜ್ಜಾಲ ನಡುತೋಪಿನ ನೀಲಗಿರಿ ಪ್ಲಾಂಟೇಶನ್‌ಗೆ ಸುಷ್ಮಾ ಮತ್ತು ಮಗು ಕರೆದೊಯ್ದು ಇಬ್ಬರನ್ನೂ ಕೊಲೆ ಮಾಡಿದ್ದ. ಅಷ್ಟೇ ಅಲ್ಲದೇ ಸಾಕ್ಷ್ಯಾಧಾರಗಳನ್ನು ನಾಶ ಮಾಡಲು ತಾಯಿ ಮತ್ತು ಮಗುವಿನ ಶವಗಳ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿ, ಪರಾರಿಯಾಗಿದ್ದ.
ಈ ನಡುವೆ ಮಾದನಾಯ್ಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಸುಷ್ಮಾಳ ಪೋಷಕರು, ಜ.26ರಂದು ಮಗಳು ಮತ್ತು ಆಕೆಯ ಮಗು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಮಗುವಾಗ ಮೇಲೆ ಆಕೆ ಹೆಚ್ಚು ಸಮಯ ಫೇಸ್ ಬುಕ್ ನಲ್ಲೇ ಕಳೆಯುತ್ತಿದ್ದಳು, ಮಗುವಿನ ಕಡೆ ಗಮನ ಕೊಡುತ್ತಿರಲಿಲ್ಲ, ಹಲವು ಮಂದಿ ಜೊತೆ ಚಾಟ್ ಮಾಡುತ್ತಿದ್ದಳು, ಹೀಗಾಗಿ ಆಕೆಯ ತಕಲೆ ಮೇಲೆ ಕಲ್ಲು ಎತ್ತು ಹಾಕಿ, ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾಗಿ ಹೇಳಿಕೆ ಕೊಟ್ಟಿದ್ದಾನೆ.