ಸೆ.7ಕ್ಕೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ; ಪ್ರಕಟಿಸುತ್ತಾರೆಯೇ ಕರ್ನಾಟಕಕ್ಕೆ ಹೆಚ್ಚಿನ ಅನುದಾನ? 

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಗಗನನೌಕೆ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಸೆಪ್ಟೆಂಬರ್ 7ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ಬೆಂಗಳೂರು/ಮೈಸೂರು:ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಗಗನನೌಕೆ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಸೆಪ್ಟೆಂಬರ್ 7ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹದ ಪರಿಹಾರ ಕಾರ್ಯಗಳಿಗೆ ಕೇಂದ್ರದಿಂದ ಹೆಚ್ಚಿನ ಪ್ರಮಾಣದ ನೆರವು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ.


ಇಸ್ರೊಗೆ ಪ್ರಧಾನಿಯವರು ಭೇಟಿ ನೀಡುವುದು ಮಾತ್ರವಲ್ಲದೆ ಕೇಂದ್ರ ಸರ್ಕಾರದ ಜೊತೆ ಇಸ್ರೊ ನಡೆಸಿದ್ದ ಆನ್ ಲೈನ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳೊಂದಿಗೆ ಸಹ ಪ್ರಧಾನಿ ಕಳೆಯಲಿದ್ದಾರೆ. ಚಂದ್ರಯಾನ-2ನ ನಿಯಂತ್ರಣ ಮತ್ತು ನಿರ್ವಹಣೆ ಹೊಂದಿರುವ ಇಸ್ರೊ ಟೆಲಿಮೆಟ್ರಿ ಟ್ರಾಕಿಂಗ್ ಅಂಡ್ ಕಮಾಂಡ್ ನೆಟ್ ವರ್ಕ್ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ರಚನೆಯಾದ ನಂತರ ಪಿಎಂ ಮೋದಿಯವರು ಭೇಟಿ ಕೊಡುತ್ತಿರುವುದು ಇದು ಮೊದಲನೇ ಬಾರಿ. 


ನಿನ್ನೆ ಮೈಸೂರಿನ ಲಲಿತ್ ಮಹಲ್ ಪ್ಯಾಲೆಸ್ ಹೆಲಿಪಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಸೆಪ್ಟೆಂಬರ್ 7ರಂದು ಪ್ರಧಾನಿಯವರು ಆಗಮಿಸುತ್ತಿದ್ದಾರೆ. ಅವರನ್ನು ನಾನು ಹಿರಿಯ ಸಚಿವರುಗಳೊಂದಿಗೆ ರಾಜಭವನದಲ್ಲಿ ಭೇಟಿ ಮಾಡಿ ಪ್ರವಾಹಪೀಡಿತ ಪ್ರದೇಶಗಳ ಸ್ಥಿತಿಗತಿ ಬಗ್ಗೆ ವಿವರಿಸುತ್ತೇನೆ. ಪ್ರಧಾನಿಯವರು ರಾಜ್ಯಕ್ಕೆ ಒಳ್ಳೆಯ ಸುದ್ದಿ ನೀಡುತ್ತಾರೆ ಎಂಬ ವಿಶ್ವಾಸದಲ್ಲಿದ್ದೇನೆ. 20 ವರ್ಷಗಳ ನಂತರ ಇಷ್ಟೊಂದು ಪ್ರಮಾಣದಲ್ಲಿ ನೆರೆ ಪ್ರವಾಹ ಬಂದು ಸಾಕಷ್ಟು ಹಾನಿಯಾಗಿದೆ, ಈಗಾಗಲೇ ಕೇಂದ್ರದ ತಂಡ ಬಂದು ಪರಿಶೀಲನೆ ನಡೆಸಿ ಹೋಗಿದೆ, ಹೀಗಾಗಿ ಕೇಂದ್ರದಿಂದ ಹೆಚ್ಚಿನ ನೆರವು ಸಿಗುವ ನಂಬಿಕೆಯಿದೆ ಎಂದರು.


ಮನೆಗಳ ದುರಸ್ತಿಗೆ 1 ಲಕ್ಷ ರೂಪಾಯಿ: ಈ ಹಿಂದೆ ತೀರ್ಮಾನಿಸಿದಂತೆ ಸರ್ಕಾರ ಪ್ರವಾಹದಲ್ಲಿ ಮನೆ ಹಾನಿಯಾದವರಿಗೆ ದುರಸ್ತಿಗೆ 1 ಲಕ್ಷ ರೂಪಾಯಿ, ಸಂಪೂರ್ಣ ಹಾನಿಯಾದವರಿಗೆ 5 ಲಕ್ಷ ರೂಪಾಯಿ ನೀಡಲಿದೆ ಎಂದರು.


ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಮೂರು ಜನ ಡಿಸಿಎಂಗಳ ನೇಮಕದ ಬಗ್ಗೆ ಪ್ರಶ್ನೆ ಕೇಳಿದಾಗ ಸಿಎಂ ಉತ್ತರಿಸದೆ ಗಡಿಬಿಡಿಯಿಂದ ಹೊರಟುಹೋದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com