ಹೊಸ ವರ್ಷಾಚರಣೆ: ಬೆಂಗಳೂರಿನ 32 ಮೇಲ್ಸೆತುವೆಗಳು ಸಂಚಾರಕ್ಕೆ ಬಂದ್

ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ 32 ಮೇಲ್ಸೆತುವೆಗಳನ್ನು ಸಂಚಾರಕ್ಕೆ ಬಂದ್ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ 32 ಮೇಲ್ಸೆತುವೆಗಳನ್ನು ಸಂಚಾರಕ್ಕೆ ಬಂದ್ ಮಾಡಲಾಗಿದೆ.

ವ್ಹೀಲಿಂಗ್ ಹಾಗೂ ಅಪಘಾತಗಳಿಗೆ ಕಡಿವಾಣ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ನಗರದ ಪ್ರಮುಖ ಮೇಲ್ಸೆತುವೆಗಳನ್ನು ಮಂಗಳವಾರ ರಾತ್ರಿ ಬಂದ್ ಮಾಡಲಿದ್ದಾರೆ. ರಾತ್ರಿ 10ರಿಂದ ಬೆಳಗಿನ ಜಾವ 4 ಗಂಟೆಯ ವರೆಗೆ ಒಟ್ಟು 32 ಮೇಲ್ಸೆತುವೆಗಳನ್ನು ಬಂದ್ ಮಾಡಲಾಗುತ್ತದೆ. ಪ್ರಮುಖವಾಗಿ ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ವೈಟ್ ಫೀಲ್ಡ್, ಹೆಚ್‍ಎಸ್‍ಆರ್ ಲೇಔಟ್, ಪುಲಿಕೇಶಿ ನಗರ, ರಿಚ್ಮಂಡ್ ರಸ್ತೆಯ ಮೇಲ್ಸೆತುವೆ, ಡೈರಿ ಸರ್ಜಕಲ್, ಕೆ.ಆರ್.ಮಾರ್ಕೆಟ್, ಆನಂದರಾವ್ ಸರ್ಕಲ್, ಬನಶಂಕರಿ ಮೇಲ್ಸೆತುವೆಗಳನ್ನು ಬಂದ್ ಮಾಡಲಾಗುತ್ತದೆ.

ಈ ಕುರಿತಂತೆ ಮಾಹಿತಿ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, 'ಯುವಜನರು ಮೇಲು ಸೇತುವೆಗಳ ಮೇಲೆ ವ್ಹೀಲಿಂಗ್, ಡ್ರಾಗ್‍ರೇಸ್, ಅತಿ ವೇಗದ ಚಾಲನೆ ಮಾಡಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಅದನ್ನು ತಪ್ಪಿಸಲು ಮೇಲ್ಸೇತುವೆಗಳ ಮೇಲಿನ ಸಂಚಾರವನ್ನು ಹೊಸ ವರ್ಷದ ಮುನ್ನಾದಿನ ರಾತ್ರಿ ನಿಷೇಧಿಸಲಾಗಿದೆ ಎಂದರು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ನಗರದಾದ್ಯಂತ ವಿಶೇಷ ತಪಾಸಣೆ ಮಾಡಿಸಲು ಸಂಚಾರ ವಿಭಾಗದ ಪೊಲೀಸರಿಗೆ ಸೂಚಿಸಲಾಗಿದೆ. ಆದಷ್ಟು ಖಾಸಗಿ ವಾಹನಗಳನ್ನು ಬಳಸದೆ, ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವಂತೆ ಮನವಿ ಮಾಡುತ್ತಿದ್ದು, ಕುಡಿದು ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಬೇಡಿ ಎಂದು ಸೂಚನೆ ನೀಡಿದರು.

ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗದಂತೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ. 2018 ಹಾಗೂ 2019ರಲ್ಲಿ ಪ್ರತಿ ದಿನ ನೂರಾರು ಅಪಘಾತಗಳು 50 ಸಾವಿರಕ್ಕೂ ಹೆಚ್ಚು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಅಪಘಾತಗಳನ್ನು ತಡೆಯಲು ಹಾಗೂ ಕುಡಿದು ವಾಹನ ಚಾಲನೆ ಮಾಡುವ ಸವಾರರಿಗೆ ಬಿಸಿ ಮುಟ್ಟಿಸಲು ಪೊಲೀಸಲು ಪ್ರಮುಖ ಮೇಲ್ಸೆತುವೆಗಳನ್ನು ಬಂದ್ ಮಾಡಲು ಚಿಂತಿಸಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ನಂತರ ಬಹುತೇಕ ವಾಹನ ಸವಾರರು ಮೇಲ್ಸೆತುವೆಗಳ ಮೇಲೆ ಸಂಚರಿಸುವಾಗ ವ್ಹೀಲಿಂಗ್ ಮಾಡಿ ಅಪಘಾತಗಳಿಗೆ ಕಾರಣರಾಗುತ್ತಾರೆ. ಇಂತಹ ಅವಘಡಗಳನ್ನು ತಪ್ಪಿಸಲು ಪೊಲೀಸರು ಪ್ರಮುಖ ಮೇಲ್ಸೆತುವೆಗಳ ಮೇಲೆ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.

ವಾಹನಗಳ ನಿಷೇಧ
ಎಂ.ಜಿ.ರಸ್ತೆ, ಬ್ರಿಗೆಡ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಜಿಯಂ ರಸ್ತೆ, ರೆಸ್ಟ್‍ಹೌಸ್ ರಸ್ತೆ, ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಮಡಿವಾಳದಿಂದ ಎಲೆಕ್ಟ್ರಾನಿಕ್‍ಸಿಟಿವರೆಗಿನ ಮೇಲ್ಸೇತುವೆ, ಮೈಕೋಲೇಔಟ್‍ನ ಡೈರಿ ವೃತ್ತ ಹಾಗೂ ಜಯದೇವ ಆಸ್ಪತ್ರೆ ಬಳಿ ಇರುವ ಮೇಲ್ಸೇತುವೆ, ದೇವರಬಿಸನಹಳ್ಳಿ ಮೇಲ್ಸೇತುವೆ, ಕಾಡುಗೋಡಿ ಮೇಲ್ಸೇತುವೆ, ಒಪೆ ಫಾರಂ, ಸರ್ಜಾಪುರ ಮೇಲ್ಸೇತುವೆ, ಎಚ್.ಎಸ್.ಆರ್.ಲೇಔಟ್‍ನ ಅಗರ, ಇಗ್ಲೂರು, ಬೆಳ್ಳಂದೂರು, ಇಂದಿರಾನಗರ ನೂರು ಅಡಿ ರಸ್ತೆಯ ಮೇಲ್ಸೇತುವೆ, ದೊಮ್ಮಲೂರು ಮೇಲ್ಸೇತುವೆ, ಕೆ.ಆರ್.ಪುರಂ ಬಳಿಯ ಎಂಎಂ ಟೆಂಪಲ್ ಬ್ರಿಡ್ಜ್, ಎಂ.ಡಿ.ಪುರ ಬ್ರಿಡ್ಜ್, ದೊಡ್ಡನೆಕ್ಕುಂದಿ ಬ್ರಿಡ್ಜ್, ಮೇಡಳ್ಳಿ ಬ್ರಿಡ್ಜ್, ಐಟಿಸಿ ಮೇಲ್ಸೇತುವೆ, ಲಿಂಗರಾಜಪುರ ಮೇಲ್ಸೇತುವೆ, ಕಲ್ಯಾಣನಗರ, ನಾಗವಾರ, ಐಒಸಿ, ಹೆಣ್ಣೂರು, ರಿಚ್‍ಮಂಡ್ ರಸ್ತೆ, ಆನಂದ್‍ರಾವ್ ವೃತ್ತ, ಕೆ.ಆರ್.ಮಾರುಕಟ್ಟೆಯ ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆಗಳ ಮೇಲೆ ಸಂಚಾರವನ್ನು ನಿಷೇಧಿಸಲಾಗಿದೆ ಎಂದರು. ತುಮಕೂರು ರಸ್ತೆಯ ಮೇಲ್ಸೇತುವೆ, ಲಗ್ಗೆರೆ ರಿಂಗ್ ರಸ್ತೆ ಮೇಲ್ಸೇತುವೆ, ವಿಮಾನ ನಿಲ್ದಾಣದ ಉದ್ದಕ್ಕೂ ಬರುವ ಮೇಲ್ಸೇತುವೆಯ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com