

ಬೆಂಗಳೂರು: ಕೊರೋನಾ ವೈರಸ್ ಹತ್ತಿಕ್ಕಲು ಲಾಕ್'ಡೌನ್ ಸೇರಿದಂತೆ ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಮಹಾಮಾರಿಯ ಹಾವಳಿ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಇದರಂತೆ ವೈರಸ್ ಸಮುದಾಯ ಹಂತ ತಲುಪದಂತೆ ನೋಡಿಕೊಳ್ಳುವುದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಕಳೆದ ಕೆಲ ದಿನಗಳಿಂದ ಒಂದಕ್ಕಿಂತಲೂ ಹೆಚ್ಚು ಪ್ರಕರಣಗಳು ಪತ್ತೆಯಾದ ನಗರದ ಹಲವು ವಾರ್ಡ್ ಗಳ ಮೇಲೆ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಕಣ್ಗಾವಲಿರಿಸಿದ್ದಾರೆ.
ಪ್ರಧಾನಿ ಮೋದಿಯವರು ನಿನ್ನೆಯಷ್ಟೇ ಲಾಕ್'ಡೌನ್ ವಿಸ್ತರಣೆ ಮಾಡಿದ್ದರು, ಅಲ್ಲದೆ, ಸೋಂಕಿತ ಪ್ರದೇಶದ ಮೇಲೆ ಹೆಚ್ಚು ಕಟ್ಟೆಚ್ಚರಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಂಕು ಕಂಡುಬಂದ ವಾರ್ಡ್ ಗಳ ಮೇಲೆ ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದಾರೆ. ನಗರದ 60 ವಾರ್ಡ್ ಗಳ ಮೇಲೆ ಕಣ್ಗಾವಲಿರಿಸಿರುವ ಅಧಿಕಾರಿಗಳು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಲ್ಲದೆ, ಈ ವರೆಗೂ 138 ವಾರ್ಟ್ ಗಳಲ್ಲಿ ಯಾವುದೇ ಸೋಂಕು ಪ್ರಕರಣಗಳು ಕಂಡು ಬರದ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ವೈರಸ್ ತಲುಪದಂತೆ ನೋಡಿಕೊಳ್ಳಲು ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದಾರೆ.
60 ವಾರ್ಡ್ ಗಲಲ್ಲಿ ಸೋಂಕು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 10 ವಾರ್ಡ್ ಗಳಲ್ಲಿ ಒಂದಕ್ಕಿಂತಲೂ ಹೆಚ್ಚು ಸೋಂಕಿತರು ಕಂಡು ಬಂದಿದ್ದು, ಉಳಿದ 50 ವಾರ್ಡ್ ಗಳಲ್ಲಿ ಒಂದು ಅಥವಾ ಎರಡು ಪ್ರಕರಣಗಳು ಕಂಡು ಬಂದಿವೆ. ಈ ವಾರ್ಡ್ ಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.
ಗೋರಿಪಾಳ್ಯ, ಬಾಪೂಜಿನಗರ ಪಾದರಾಯನಪುರ, ಸಿಂಗಸಂದ್ರ, ವೈಟ್ ಫೀಲ್ಡ್, ರಾಜಾಜಿನಗರ, ರಾಧಾಕೃಷ್ಣ ನಗರ, ಹೊರಮಾವು, ಅರಮನೆ ನಗರ, ಜೀವನ್ ಭೀಮಾ ನಗರ, ವಸಂತ ನಗರ, ಆಜಾದ್ ನಗರ, ಜೆಪಿ ನಗರ, ಶಾಕಾಂಬರಿ ನಗರ ಹೆಚ್ಚಿನ ನಿಗಾವಹಿಸಲಾಗಿದೆ.
ಬಿಬಿಎಂಪಿ ವಾರ್ ರೂಂಗಳಲ್ಲಿರುವ ವರದಿಗಳ ಪ್ರಕಾರ ನಗರದ ಪೂರ್ವ ಭಾಗದಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಏಪ್ರಿಲ್ 12ರವರೆಗೂ 15 ಪ್ರಕರಣಗಳು ಈ ಭಾಗದಲ್ಲಿ ದಾಖಲಾಗಿವೆ. ಇನ್ನು ದಕ್ಷಿಣ ಭಾಗದಲ್ಲಿ 15, ಪಶ್ಚಿಮ ಭಾಗದಲ್ಲಿ 10 ಪ್ರಕರಣಗಳು ಕಂಡು ಬಂದಿವೆ,
ಮಹದೇವಪುರ (10), ಬೊಮ್ಮನಹಳ್ಳಿ (4), ಯಲಹಂಕ (2) ಮತ್ತು ರಾಜಾಜಿನಗರದಲ್ಲಿ ಒಂದು ಪ್ರಕರಣ ದಾಖಲಾಗಿವೆ. ಆದರೆ, ದಾಸರಹಳ್ಳಿಯಲ್ಲಿ ಮಾತ್ರ ಯಾವುದೇ ಪ್ರಕರಣಗಳೂ ಕಂಡು ಬಂದಿಲ್ಲ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಅವರು, ಕೊರೋನಾ ಸೋಂಕು ಕಾಣಿಸಿಕೊಂಡ 3 ಕಿ.ಮೀ ಪ್ರದೇಶವನ್ನ ಬಫರ್ ಝೋನ್ ಎಂದು ಗುರುತಿಸಲಾಗಿದೆ. ಸೋಂಕು ಪ್ರಕರಣ ದಾಖಲಾದ ಪ್ರದೇಶಗಳನ್ನು ಕೆಲವು ನಿರ್ದಿಷ್ಟ ಮಾರ್ಗಸೂಚಿಗಳ ಆಧಾರದ ಹಾಟ್'ಸ್ಪಾಟ್ ಎಂದು ಗುರುತಿಸಲಾಗಿದೆ. ಕಳೆದ 28 ದಿನಗಳಲ್ಲಿ ಯಾರಿಗಾದರೂ ಕೊರೋನಾ ಸೋಂಕು ದೃಢಪಟ್ಟಿದ್ದರೆ ಹಾಗೂ ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿಯೊಂದಿಗೆ 50 ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದರೆ ಆ ಪ್ರದೇಶವನ್ನು ಹಾಟ್ ಸ್ಪಾಟ್ ಎಂದು ಪರಿಗಣಿಸಲಾಗುತ್ತದೆ. ಈ ಮಾನದಂಡಗಳ ಆಧಾರದ ಮೇಲೆ ಸದ್ಯ ನಗರದ 36 ಪ್ರದೇಶಗಳನ್ನು ಹಾಟ್ ಸ್ಪಾಟ್ ಎಂದು ಗುರ್ತಿಸಲಾಗಿದೆ. ಇಲ್ಲಿ ಉಳಿದ ಪ್ರದೇಶಗಳಿಗಿಂತ ತುಸು ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಬಾಪೂಜಿನಗರ ಹಾಗೂ ಪಾದರಾಯನಪುರ ವಾರ್ಡ್'ಗಳನ್ನು ಸದ್ಯ ಸೀಲ್ ಡೌನ ಮಾಡಿದೆ. ಬೇರೆ ಯಾವುದೇ ಪ್ರದೇಶವನ್ನು ಸೀಲ್ ಡೌನ್ ಮಾಡಿಲ್ಲ. ಇಲ್ಲಿ ಯಾರೂ ಅನಾವಶ್ಯಕವಾಗಿ ಹೊರಗೆ ಬರದಂತೆ ಹಾಗೂ ಒಳಗೆ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯಕ್ಕೆ ನಗರದ ಬೇರೆ ಪ್ರದೇಶವನ್ನು ಸೀಲ್ ಡೌನ್ ಮಾಡುವ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದ್ದಾರೆ.