ಬೆಂಗಳೂರು: ಮಂಗಳವಾರ ರಾತ್ರಿ ಹಿಂಸಾಚಾರ ಉಂಟಾಗಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಗೊಂಡಿದ್ದ ರಾಜಧಾನಿ ಬೆಂಗಳೂರಿನ ಪೂರ್ವಭಾಗದಲ್ಲಿ ಇದೀಗ ಶಾಂತಿ ನೆಲೆಸಿದೆ.
ರಾತ್ರಿ ಸತತ 5 ಗಂಟೆಗಳ ಗಲಾಟೆಯಿಂದ ಮೂಡಿದ್ದ ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗೋಲಿಬಾರ್, ಲಾಠಿ ಚಾರ್ಜ್ ಸೇರಿದಂತೆ ಸಕಲ ಕ್ರಮ ಕೈಗೊಂಡರು. ಗೋಲಿಬಾರ್ ಬಳಿಕ ಜೀವಭೀತಿಯಿಂದ ದುಷ್ಕರ್ಮಗಿಳು ಓಡಿ ಹೋಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಡಿಜೆ.ಹಳ್ಳಿ ಹಾಗೂ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಆಯುಕ್ತ ಕಮಲ್ ಪಂತ್, ಗಲಭೆಪೀಡಿತ ಪ್ರದೇಶಗಳಲ್ಲಿ ಬಿಗಿ ಭದ್ರತೆ ನಿಯೋಜಿಸಿದ್ದರು. ಈ ಗಲಭೆಪೀಡಿತ ಕಡೆ ಮುಂಜಾನೆಯಿಂದಲೇ ಜನರ ಸಂಚಾರಕ್ಕೆ ನಿಷೇಧವಿತ್ತು.
ಗಲಭೆ ಬಳಿಕ ನಸುಕಿನ 3 ಗಂಟೆ ಬಳಿಕ ಸಣ್ಣದೊಂದು ಗಲಾಟೆ ಕೂಡ ಸಂಭವಿಸಿದೆ ಸಂಪೂರ್ಣವಾಗಿ ಪರಿಸ್ಥಿತಿ ಪೊಲೀಸರ ಹತೋಟಿಗೆ ಬಂದಿತ್ತು. ಆದರೂ, ಕೆಲವೆಡೆ ಬೂದಿ ಮುಚ್ಚಿದ ಕೆಂಡದ ವಾತಾವರಣ ಗೋಚರಿಸಿದೆ. ಈ ಸೂಕ್ಷ್ಮ ಅರಿತು ಆ ಪ್ರದೇಶಗಳಲ್ಲಿ ಮತ್ತಷ್ಟು ದಿನ ಬಿಗಿ ಬಂದೋಬಸ್ತ್ ಮುಂದುವರೆಸಲು ಆಯುಕ್ತರು ನಿರ್ಧರಿಸಿದ್ದಾರೆ.
ಬುಧವಾರ ಐವರು ಐಜಿಪಿಗಳು ಸೇರಿದಂತೆ ಹಿರಿಯ ಅಧಿಕಾರಿಗಳೇ ಘಟನಾ ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತೆ ನಿರ್ವಹಿಸಿದ್ದಾರೆ, ಗಲ್ಲಿ ಗಲ್ಲಿಯಲ್ಲೂ ಖಾಕಿಧಾರಿಗಳು ಪಹರೆ ನಡೆಸಲಾಗಿದೆ.
ಗಲಭೆ ಹಿನ್ನೆಲೆಯಲ್ಲಿ ಡಿಜೆ.ಹಳ್ಳಿ. ಕೆ.ಜಿಹಳ್ಳಿ ಕಾವಲ್ ಭೈರಸಂದ್ರ, ಶಿವಾಜಿನಗರ, ಇಸ್ಲಾಂಪುರ, ಗೋವಿಂದಪುರ ಹಾಗೂ ಬಾಣಸವಾಡಿ ಸೇರಿದಂತೆ ಪೂರ್ವ ಭಾಗದಲ್ಲಿ ಅಘೋಷಿತ ಬಂದ್ ವಾತಾವರಣ ಕಂಡು ಬಂದಿತು. ಅಂಗಡಿ ಮುಗ್ಗಟ್ಟುಗಳು ಬಾಗಿಲುಗಳು ಮುಚ್ಚಿದ್ದವು. ಜನರ ಸಂಚಾರ ವಿರಳವಾಗಿತ್ತು. ಕಣ್ಣು ಹಾಯಿಸಿದೆಡೆ ಪೊಲೀಸರು ಕಂಡು ಬಂದರು. ಇನ್ನು ಮುಂಜಾಗ್ರತಾ ಕ್ರಮವಾಗಿ ಡಿಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ 24 ಗಂಟೆಗಳ ನಿಷೇಧಾಜ್ಞೆಯನ್ನು ಆಯುಕ್ತರು ಜಾರಿಗೊಳಿಸಿದ್ದಾರೆ.
Advertisement