

ಬೆಂಗಳೂರು: ಸರ್ಕಾರ ಹಾಗೂ ರೈತರ ನಡುವಣ ಜಟಾಪಟಿ ತೀವ್ರಗೊಂಡಿರುವ ಪರಿಣಾಮ ಬೆಂಗಳೂರು ನಗರ ಪ್ರತಿ ದಿನವೂ ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿದೆ.
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿರಿ ರೈತರು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ದೆಹಲಿಯಲ್ಲಿ ರೈತರು ಪ್ರತಿಭಟನೆ, ಭಾರತ್ ಬಂದ್ ನಡೆಸಿದ ರೀತಿಯಲ್ಲೇ ಬೆಂಗಳೂರಿನಲ್ಲೂ ರೈತರು ದಿನಕ್ಕೊಂದು ರೀತಿಯ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಕ ಪ್ರತಿಭಟನೆ, ರಸ್ತೆ ತಡೆ, ಬಾರುಕೋಲು ಚಳುವಳಿಯಂತಹ ಹೋರಾಟಗಳನ್ನು ರೈತ ಸಂಘಟನೆಗಳು ನಡೆಸುತ್ತಲೇ ಇವೆ.
ರಾಜಭವನ ಮುತ್ತಿಗೆ ಹಾಕಲು ಮುಂದಾಗಿದ್ದ ರೈತರಿಗೆ ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ರಾಜ್ಯಪಾಲರನ್ನು ಭೇಟಿ ಮಾಡಿದ ರೈತರು, ತಮ್ಮ ಆತಂಕ, ಅಳಲು, ಕಾಯ್ದೆಯಲ್ಲಿನ ರೈತ ವಿರೋಧಿ ಅಂಶಗಳನ್ನು ಹೇಳಿಕೊಂಡರು. ಈ ವೇಳೆ ಸರ್ಕಾರಕ್ಕೆ ರೈತರ ಅಭಿಪ್ರಾಯ ಪಡೆಯಲು ನಿರ್ದೇಶನ ನೀಡುವ ಭರವಸೆ ರಾಜ್ಯಪಾಲರಿಂದ ಸಿಕ್ಕಿತು. ರಾಜಭವನದಿಂದ ಹಿಂತಿರುಗಿದ ಕೂಡಲೇ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ರೈತರು ಘೋಷಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ರೈತಪರ ನಾಯಕ ಶಾಂತಕುಮಾರ್ ಅವರು, ಕಾಯ್ದೆ ಕುರಿತು ರೈತರೊಂದಿಗೆ ಮಾತುಕತೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವ ಭರವಸೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡುತ್ತಿದ್ದೇವೆಂದು ಹೇಳಿದ್ದಾರೆ.
ಈ ನಡುವೆ ನಿನ್ನೆಯ ರೈತರ ಪ್ರತಿಭಟನೆ ವೇಶೆ ಕಾಂಗ್ರೆಸ್ ನಾಯಕರು ಸಾಧ್ ನೀಡಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಶಾಸಕರಾದ ಜಮೀರ್ ಅಹ್ಮದ್, ಯುಟಿ ಖಾದರ್ ಹಾಗೂ ಇನ್ನಿತರೆ ನಾಯಕರು ರೈತರಿಗೆ ಸಾಧ್ ನೀಡಿದ್ದರು.
ಮತ್ತೊಂದೆಡೆ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಬಸ್ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆ ನಿರ್ಧರಿಸಿದೆ.
ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ಆಗ್ರಹಿಸಿ ಗುರುವಾರ ರಾಜಧಾನಿಯಲ್ಲಿ ಸಾರಿಗೆ ನೌಕರರು ಬೃಹತ್ ಪ್ರತಿಭಟನೆ ಮೂಲಕ ವಿಧಾನಸೌಧ ಚಲೋ ರ್ಯಾಲಿ ನಡೆಸಿದರು. ಈ ವೇಳೆ ವಿಧಾನಸೌಧ ಮುತ್ತಿಗೆ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು.
ಇದಾದ ಬಳಿಕ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಸಾರಿಗೆ ನೌಕರರ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯಾದ್ಯಂತ ಬಸ್ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು.
ಇದರಿಂದ ಬಿಎಂಟಿಸಿ, ಕೆಎಸ್ಆರ್'ಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. 4 ನಿಗಮಗಳಿಂದ ಸುಮಾರು 1.30 ಲಕ್ಷ ಸಾರಿಗೆ ನೌಕರರು ಇದ್ದಾರೆ. ಈ ಪೈಕಿ ಶೇ.80ರಷ್ಟು ಚಾಲನಾ ಸಿಬ್ಬಂದಿಯೇ ಇದ್ದಾರೆ. ಹೀಗಾಗಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡರೆ ಬಸ್ ಕಾರ್ಯಾಚರಣೆಗೆ ಸಮಸ್ಯೆಯಾಗಲಿದೆ.
ಇದಕ್ಕೂ ಮುನ್ನ ರಾಜ್ಯದ ಎಲ್ಲೆಡೆಯಿಂದ ಆಗಮಿಸಿದ ಬೃಹತ್ ಸಂಖ್ಯೆಯ ಸಾರಿಗೆ ನೌಕರರು ವಿಧಾನಸೌಧ ಚಲೋ ರ್ಯಾಲಿ ನಡೆಸಿದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿ ನೂರಾರು ನೌಕರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಹಾಗೂ ಸ್ಫಟಿಕಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ಅನೇಕ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೋರಾಟಕ್ಕೆ ಸಾಥ್ ನೀಡಿದರು.