ಆಸ್ಪತ್ರೆಗಳ ಅಮಾನವೀಯ ವರ್ತನೆ: ಹೊರ ಪ್ರಪಂಚ ನೋಡುವುದಕ್ಕೂ ಮುನ್ನವೇ ಅಸುನೀಗಿದ ಮಗು!

ಸತತ 8 ಗಂಟೆಗಳ ಕಾಲ ಹೆರಿಗೆ ನೋವಿನಿಂದ ಬಳಲುತ್ತಾ ಆಸ್ಪತ್ರೆಗಳಿಗೆ ಸುತ್ತಾಡಿದರೂ ದಾಖಲು ಎಲ್ಲಿಯೂ ದಾಖಲು ಮಾಡಿಕೊಳ್ಳದ ಪರಿಣಾಮ ಪ್ರಪಂಚವನ್ನು ನೋಡಬೇಕಾಗಿದ್ದ ಕಂದಮ್ಮ ಜೀವ ಬಿಟ್ಟಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ಸೋಮವಾರ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸತತ 8 ಗಂಟೆಗಳ ಕಾಲ ಹೆರಿಗೆ ನೋವಿನಿಂದ ಬಳಲುತ್ತಾ ಆಸ್ಪತ್ರೆಗಳಿಗೆ ಸುತ್ತಾಡಿದರೂ ದಾಖಲು ಎಲ್ಲಿಯೂ ದಾಖಲು ಮಾಡಿಕೊಳ್ಳದ ಪರಿಣಾಮ ಪ್ರಪಂಚವನ್ನು ನೋಡಬೇಕಾಗಿದ್ದ ಕಂದಮ್ಮ ಜೀವ ಬಿಟ್ಟಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ಸೋಮವಾರ ನಡೆದಿದೆ. 

ಕೊರೋನಾ ಪರೀಕ್ಷೆ ವರದಿ ನೀಡಬೇಕು, ಹಾಸಿಗೆ ಖಾಲಿ ಇಲ್ಲ. ವೈದ್ಯರು ಇಲ್ಲ ಎಂದು ಹೇಳಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರಿಂದ ಮಗು ಗರ್ಭದಲ್ಲಿಯೇ ಸಾವನ್ನಪ್ಪಿತು ಎಂದು ಮಹಿಳೆಯರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆದರೆ, ಆಸ್ಪತ್ರೆಯ ಮುಖ್ಯಸ್ಥರು ಗರ್ಭದಲ್ಲೇ ನಾಲ್ಕು ದಿನಗಳ ಹಿಂದೆಯೇ ಮಗು ಮೃತಪಟ್ಟಿದ್ದು ಎಂದು ಹೇಳುತ್ತಿದ್ದಾರೆ.

ಶ್ರೀರಾಂಪುರದ ನಿವಾಸಿ ನಿವೇದಿತಾ (23) ಅವರು ಆಟೋ ರಿಕ್ಷಾದಲ್ಲಿ ಭಾನುವಾರ ತಡರಾತ್ರಿ 2.30ರಿಂದ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ ಮತ್ತು ಶ್ರೀರಾಮಪುರ ಬಿಬಿಎಂಪಿ ಆಸ್ಪತ್ರೆಗೆ ತಿರುಗಾಡಿದ್ದಾರೆ. ಎಲ್ಲಿಯೂ ಕೂಡ ಹಾಸಿಗೆ, ವೈದ್ಯರಿಲ್ಲ ಎಂಬ ಕಾರಣ ನೀಡಿ ದಾಖಲು ಮಾಡಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. 

ಪುನಃ ಬೆಳಿಗ್ಗೆ 9ಕ್ಕೆ ಮತ್ತೆ ಕೆ.ಸಿ.ಜನರಲ್ ಆಸ್ಪತ್ರೆ ವಾಪಸ್ ಬಂದ ವೇಳೆ ಆಟೋದಲ್ಲಿ ಹೆರಿಗೆಯಾಗಿದೆ. ಆದರೆ, ಗರ್ಭದಲ್ಲಿ ಮಗು ಮೃತಪಟ್ಟಿತ್ತು. 

ಗರ್ಭಿಣ ಸಹೋದರ ಮಾತನಾಡಿ, ರಾತ್ರಿ ಮೂರು ಗಂಟೆಗೆ ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕೊರೋನಾ ಪರೀಕ್ಷೆ ಮಾಡಬೇಕೆಂದು ತಿಳಿಸಿ ದಾಖಲು ಮಾಡಿಕೊಳ್ಳಲು ನಿರಾಕರಿಸಿದರು. ಹೀಗಾಗಿ ವಾಣಿ ವಿಲಾಸ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ, ಅಲ್ಲಿ ಕೇವಲ ಕೊರೋನಾ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿ ವಾಪಸು ಕಳುಹಿಸಿದರು. ಅಲ್ಲಿಂದ ಶ್ರೀರಾಮಪುರದ ಸರ್ಕಾರ ಆಸ್ಪತ್ರೆಗೆ ಬಂದು ವೈದ್ಯರಿಗಾಗಿ ಬೆಳಿಗ್ಗೆಯವರೆಗೂ ಕಾಯಬೇಕಾಯಿತು. ಈ ವೇಳೆಗಾಗಲೇ ಹೆರಿಗೆ ನೋವು ಹೆಚ್ಚಾಗಿತ್ತು. ನೋವು ನೋಡಲಾರದೆ ಕೆಸಿ ಜನರಲ್ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ದಾರಿ ಮಧ್ಯೆಯೇ ಹೆರಿಗೆಯಾದರೂ ಮಗು ತೀರಿಕೊಂಡಿತ್ತು ಎಂದು ತಿಳಿಸಿದ್ದಾರೆ. 

ಘಟನೆಗೆ ಕುರಿತು ಮಲ್ಲೇಶ್ವರದ ಕೆಸಿ.ಜನರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವೆಂಕಟೇಶಯ್ಯ ಅವರು ಮಾತನಾಡಿ, ರಾತ್ರಿ ಸುಮಾರು 2 ಗಂಟೆಗೆ ಮಹಿಳೆ ಆಸ್ಪತ್ರೆಗೆ ಬಂದಿದ್ದಾರೆ. ಕೂಡಲೇ ಪರಿಶೀಲಿಸಿದ ವೈದ್ಯರು ಕಳೆದ 4 ದಿನಗಳ ಹಿಂದೆ ಮಗು ಮೃತಪಟ್ಟಿದೆ. ಹಾಗಾಗಿ ತಕ್ಷಣ ಮಗು ತೆಗೆಯಬೇಕೆಂದು ಹೇಳಿದ್ದಾರೆ. ಇದನ್ನು ನಂಬದ ಮಹಿಳೆ ಕುಟುಂಬಸ್ಥರು, ಬೇರೆ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸುತ್ತೇವೆಂದು ಕರೆದುಕೊಂಡು ಹೋಗಿದ್ದಾರೆ. ಆದರೆ, ಎಲ್ಲಿಯೂ ದಾಖಲಿಸಿಕೊಂಡಿಲ್ಲ. ಸೋಮವಾರ ನಸುಕಿನ ಜಾವ ಮತ್ತೆ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಮಗುವಿನ ತಲೆ ಗರ್ಭಕೋಶದಿಂದ ಸ್ವಲ್ಪ ಹೊರಗೆ ಬಂದಿತ್ತು. ಸ್ವಲ್ಪ ಕೊಳೆತಿತ್ತು. ಮಗುವನ್ನು ಹೊರಗೆ ತೆಗೆಯಲಾಗಿದೆ. ತಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಆರೋಗ್ಯವಾಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಘಟನೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡದ ಆಸ್ಪತ್ರೆಗಳ ವಿರುದ್ಧ ಕಿಡಿಕಾರಿದ್ದಾರೆ. 

ರಾಜ್ಯದಲ್ಲಿ ಕೊರೋನಾ ಸೋಂಕಿತರಿಗಿಂತ ಹೆಚ್ಚು ಬೇರೆ ಕಾಯಿಲೆಯ ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಮುಖ್ಯಮಂತ್ರಿಯವರೇ ಚಿಕಿತ್ಸೆ ನಿರಾಕರಿಸಿರುವ ಕಾಸಗಿ ಆಸ್ಪತ್ರೆಗಳ ಪರವಾನಗಿಯನ್ನು ರದ್ದು ಮಾಡುವ ಕಠಿಣ ಕ್ರಮ ಕೈಗೊಳ್ಳಿ. ನಿಮ್ಮ ಹುಸಿ ಬೆದರಿಕೆಯಿಂದ ಅವರು ಜಗ್ಗುವವರಲ್ಲ. ಹೆರಿಗೆಗಾಗಿ ಬೆಂಗಳೂರಿನ ಆಸ್ಪತ್ರೆಗಳೆಲ್ಲಾ ಸುತ್ತಾಡಿ ಗರ್ಭಿಣಿಯೊಬ್ಬರಿಗೆ ಎಲ್ಲಿಯೂ ಸೇರಿಸಿಕೊಳ್ಳದೆ ಇದ್ದಾಗ ಕೊನೆಗೆ ಆಟೋ ರಿಕ್ಷಾದಲ್ಲಿಯೇ ಹಡೆದ ಪರಿಣಾಮ ಹಸುಗೂಸನ್ನು ಕಳೆದುಕೊಳ್ಲಬೇಕಾಯಿತು. ಮುಖ್ಯಮಂತ್ರಿಯವರೇ ಮೊದಲು ಈ ನತದೃಷ್ಟ ತಾಯಿಯ ಮಗುವಿನ ಕೊಲೆಗಡುಕ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ವಿಡಿಯೋ ಹರಿಬಿಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com