ರಾಜ್ಯ

ರಾಜ್ಯದಲ್ಲಿ ಕೊರೋನಾ ಮರಣ ಪ್ರಮಾಣ: ಮೈಸೂರಿನಲ್ಲಿ ಅತಿಹೆಚ್ಚು!

ರಾಜ್ಯದಲ್ಲಿ ಕೊರೋನಾ ಮರಣ ಪ್ರಮಾಣ: ಮೈಸೂರಿನಲ್ಲಿ ಅತಿಹೆಚ್ಚು!
ಸಂಗ್ರಹ ಚಿತ್ರ
Published On :

ಮೈಸೂರು: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶುಕ್ರವಾರ ಹೊಸದಾಗಿ 281 ಮಂದಿಯಲ್ಲಿ ಸೋಂಕು ಇರುವುದು ದೃಢವಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಇಷ್ಟು ಸೋಂಕಿತ ಪ್ರಕರಣ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2450ಕ್ಕೆ ಏರಿಕೆಯಾಗಿದೆ. 

ಈ ನಡುವೆ ಕೋವಿಡ್ ವೈರಸ್ ಸೋಂಕಿನಿಂದ 6 ಮಂದಿ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 99ಕ್ಕೆ ಏರಿಕೆಯಾಗಿದೆ.

ಇದರೊಂದಿಗೆ ರಾಜ್ಯ ಕೊರೋನಾ ಮರಣ ಪ್ರಮಾಣದಲ್ಲಿ ಮೈಸೂರು ಅಗ್ರಸ್ಥಾನ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಶೇ.4.3ಕ್ಕೆ ತಲುಪಿದೆ. ರಾಜ್ಯದಲ್ಲಿ ಪ್ರತೀ ಲಕ್ಷಕ್ಕೆ ಶೇ.26.3 ರಷ್ಟು ಮರಣ ಪ್ರಮಾಣವಿದೆ. 

ಕಳೆದ ಮೂರು ದಿನಗಳಿಂದ ಮೈಸೂರಿನಲ್ಲಿ 542 ಸೋಂಕಿತ ಪ್ರಕರಣಗಳು ಹಾಗೂ 19 ಸಾವು ಸಂಭವಿಸಿದೆ. ಅಲ್ಲದೆ, 75 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಗುಣಮುಖರಾಗುತ್ತಿರುವ ಪ್ರಮಾಣ ಕೂಡ ಜಿಲ್ಲೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. 

ಈಗಾಗಲೇ ಕೋವಿಡ್ ಸೋಂಕಿತರ ಪೈಕಿ 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೂ ಒಟ್ಟಾರೆ 749 ಗುಣಮುಖರಾಗಿದ್ದಾರೆ. ಸಾರಿ ಪ್ರಕರಣದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 65 ವರ್ಷದ ವೃದ್ಧೆ, 61 ವರ್ಷದ ವೃದ್ಧ, 52 ವರ್ಷದ ವ್ಯಕ್ತಿ, 26 ವರ್ಷದ ಮಹಿಳೆ, 60 ವರ್ಷದ ವೃದ್ಧ ಹಾಗೂ 67 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ 12 ಮಂದಿಯನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ ಇತರೆ ಪರೀಕ್ಷೆಗಳು ಮೂರು ಖಾಸಗಿ ಆಸ್ಪತ್ರೆಗಳಲ್ಲಿ ಸುದೀರ್ಘವಾಗಿ ನಡೆಯುತ್ತಿದೆ. ನೆರೆ ಜಿಲ್ಲೆಗಳ ಸಾವುಗಳನ್ನು ಸೇರ್ಪಡೆಗೊಳಿಸಿದರ ಪರಿಣಾಮ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಮಂಡ್ಯ ಹಾಗೂ ಚಾಮರಾಜನಗರದ ರೋಗಿಗಳನ್ನು ಮೈಸೂರಿಗೆ ಕಳುಹಿಸಲಾಗುತ್ತಿದೆ. ಇಲ್ಲಿಗೆ ಬರುವಷ್ಟರಲ್ಲಿ ಸ್ಥಿತಿ ಗಂಭೀರವಾಗಿ ಸಾವನ್ನಪ್ಪುತ್ತಿದ್ದಾರೆ. ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರು ಹೆಚ್ಚು ಸಾವನ್ನಪ್ಪುತ್ತಿದ್ದಾರೆಂದು ಮೈಸೂರು ಉಪ ಆಯುಕ್ತ ಅಭಿರಾಮ್ ಜಿ.ಶಂಕರ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.