ಕೋವಿಡ್-19: ಪ್ರತಿದಿನ ತನ್ನ ದಾಖಲೆಯನ್ನು ತಾನೇ ಮುರಿಯುತ್ತಿರುವ ಕರ್ನಾಟಕ, ಕೊರೋನಾ ಪಾಸಿಟಿವ್ ದುಪ್ಪಟ್ಟು!

ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಪ್ರತೀನಿತ್ಯ ಕರ್ನಾಟಕ ತನ್ನ ದಾಖಲೆಯನ್ನು ತಾನೇ ಮುರಿಯುತ್ತಿದೆ. ರಾಜ್ಯದಲ್ಲಿ ಸೋಂಕಿನ ಸರಾಸರಿ ಪಾಸಿಟಿವಿಟಿ ಪ್ರಮಾಣ ದುಪ್ಪಟ್ಟಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಪ್ರತೀನಿತ್ಯ ಕರ್ನಾಟಕ ತನ್ನ ದಾಖಲೆಯನ್ನು ತಾನೇ ಮುರಿಯುತ್ತಿದೆ. ರಾಜ್ಯದಲ್ಲಿ ಸೋಂಕಿನ ಸರಾಸರಿ ಪಾಸಿಟಿವಿಟಿ ಪ್ರಮಾಣ ದುಪ್ಪಟ್ಟಾಗಿದೆ. 

ಕಳೆದ ಜು.10ರವರೆಗೆ ಪ್ರತಿ 100 ಪರೀಕ್ಷೆಗಳಲ್ಲಿ ಸರಾಸರಿ ಶೇ.4.18ರಷ್ಟಿದ್ದ ಪಾಸಿಟಿವಿಟಿ ದರ ಇದೀಗ ಶೇ.8.60ಕ್ಕೆ ಏರಿಕೆಯಾಗಿದೆ. ಅಲ್ಲದೆ, ಕಳೆದ 18 ದಿನಗಳಲ್ಲಿ ಪ್ರತಿ 100 ಪರೀಕ್ಷೆಗಳಲ್ಲಿ ಸರಾಸರಿ ಶೇ.16.88 ಮಂದಿಗೆ ಸೋಂಕು ದೃಢಪಡುವ ಮೂಲಕ ಆತಂಕ ಹೆಚ್ಚಾಗುವಂತೆ ಮಾಡಿದೆ. 

ರಾಜ್ಯದಲ್ಲಿ ಜು.10ರವರೆಗೆ ಪಾಸಿಟಿವಿಟಿ ದರ ಶೇ.4.18ರಷ್ಟು ಮಾತ್ರ ಇತ್ತು. ಜುಲೈ.10ರವರೆಗೆ 7.98 ಲಕ್ಷ ಪರೀಕ್ಷೆ ನಡೆಸಿದ್ದರೆ, 33,418 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿತ್ತು. 

ಇದೀಗ ಜುಲೈ.28ರ ವೇಳೆಗೆ 12.42 ಲಕ್ಷ ಪರೀಕ್ಷೆ ನಡೆಸಿದ್ದು, 1,07,001 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಪ್ರತಿ 100 ಪರೀಕ್ಷೆಯಲ್ಲಿ ಶೇ.8.60 ಮಂದಿಗೆ ಸೋಂಕು ದೃಢಪಟ್ಟಂತಾಗಿದೆ. ಆತಂಕಕಾರಿ ವಿಚಾರವೆಂದರೆ ಜುಲೈ.10ರಿಂದ ಕಳೆದ 18 ದಿನಗಳಲ್ಲಿ 4,03,697 ಪರೀಕ್ಷೆಯಲ್ಲಿ ನಡೆಸಿದ್ದು ಬರೋಬ್ಬರಿ 68,158 ಮಂದಿಗೆ ಸೋಂಕು ದೃಢಪಟ್ಟಿದೆ. 

ಈ ಮೂಲಕ ಪ್ರತಿ 100 ಪರೀಕ್ಷೆಯಲ್ಲಿ ಶೇ.16.88 ಮಂದಿಗೆ ಸೋಂಕು ದೃಢಪಟ್ಟಂತಾಗಿದೆ. ಪಾಸಿಟಿವ್ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

ರಾಜ್ಯದಲ್ಲಿ ಬುಧವಾರ ಒಂದೇ ದಿನ 5,536 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,07,00ಕ್ಕೆ ಏರಿಕೆಯಾಗಿದೆ. ಕಳೆದ 6 ದಿನಗಳಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸತತ 5,000 ಗಡಿ ದಾಟುತ್ತಲೇ ಇದ್ದು, ಕಳೆದ 6 ದಿನಗಳಲ್ಲಿ 31,168 ಕೇಸ್ ಗಳು ಪತ್ತೆಯಾದಂತಾಗಿವೆ. ಹೆಚ್ಚು ಸೋಂಕಿತರ ಸಂಖ್ಯೆ ಪತ್ತೆಯಾಗುತ್ತಿರುವುದು ಕೂಡ ರಾಜ್ಯದಲ್ಲಿ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗಳು ಪರಿಣಾಕಾರಿಯಾಗಿ ನಡೆಯುತ್ತಿವೆ ಎಂಬುದನ್ನು ತಿಳಿಯಬಹುದಾಗಿದೆ. 

ಬೆಂಗಳೂರು ನಗರ ಜಿಲ್ಲೆ ಒಂದರಲ್ಲಿಯೇ ನಿನ್ನೆ ಬರೋಬ್ಬರಿ 1989 ಮಂದಿಗೆ ಸೋಂಕು ಹರಡಿರುವುದು ಕಂಡು ಬಂದಿತ್ತು. ಇನ್ನು ಬಳ್ಳಾರಿಯಲ್ಲಿ 452, ಕಲಬುರಗಿ 283, ಬೆಳಗಾವಿ 228, ಮೈಸೂರು 220, ತುಮಕೂರು 207, ಕೋಲಾರ 174, ದಕ್ಷಿಣ ಕನ್ನಡ, ಧಾರವಾಡ ತಲಾ 173, ವಿಜಯಪುರ 153, ಬೆಂಗಳೂರು ಗ್ರಾಮಾಂತರ 107 ಕೇಸ್ ದಾಖಲಾಗಿದೆ. 

ರಾಜ್ಯದಲ್ಲಿ ಕೇವಲ ನಾಲ್ಕು ಜಿಲ್ಲೆಗಳು ಮಾತ್ರ ತನ್ನ ಸಾವಿನ ಪ್ರಮಾಣವನ್ನು ಶೇಕಡಾ 1 ಕ್ಕಿಂತ ಕಡಿಮೆಯಿರುವಂತೆ ನೋಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಮಂಡ್ಯ (0.8%), ಬೆಂಗಳೂರು ಗ್ರಾಮೀಣ (0.6%), ಉಡುಪಿ (0.4%) ಮತ್ತು ಯಾದಗಿರಿ (0.1%)ರಷ್ಟು ಸಾವಿನ ಪ್ರಮಾಣ ಕಂಡು ಬಂದಿದೆ. 

ಬೆಂಗಳೂರು ಒಂದಲ್ಲಿಯೇ ಮಂಗಳವಾರ 40 ಮಂದಿ ಸೋಂಕಿತರು ಮೃತಪಟ್ಟಿದ್ದು, ಉಳಿದಂತೆ ಮೈಸೂರು 8, ಉಡುಪಿ 7, ಕಲಬುರಗಿ ಬೆಳಗಾವಿ, ಧಾರವಾಡ ತಲಾ 6, ಹಾಸನ 5, ದಾವಣಗೆರೆ 4, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ ತಲಾ 3, ಬಾಗಲಕೋಟೆ, ಗದಗ, ಬೀದರ್ ತಲಾ 2, ತುಮಕೂರು, ಕೋಲಾರ, ವಿಜಯನಗರ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಕೊಡಗಿನಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ 74 ಸಾರಿ (ಉಸಿರಾಟ ತೊಂದರೆ), 17 ಐಎಲ್ಐ (ವಿಷಮಶೀತ ಜ್ವರ) ಹಿನ್ನೆಲೆಯ ಪ್ರಕರಣಗಳಾಗಿವೆ. 

ರಾಜ್ಯದ ಸಾವಿನ ಸಂಖ್ಯೆ 2,055 ರಷ್ಟಿದ್ದು, ಬೆಂಗಳೂರು ನಗರದಲ್ಲಿ ಒಟ್ಟು ಸಾವಿನ ಸಂಖ್ಯೆ 1,000ಕ್ಕೆ ಏರಿಕೆಯಾಗಿದೆ. ಬುಧವಾರ ಸೋಂಕಿನಿಂದ ಬಿಡುಗಡೆಯಾದವರ ಸಂಖ್ಯೆ 2,819ರಷ್ಟಿದ್ದು, ಬೆಂಗಳೂರಿನಿಂದ 572, ಬಳ್ಳಾರಿಯಿಂದ 529, ವಿಜಯಪರದಿಂದ 201, ದಕ್ಷಿಣ ಕನ್ನಡದಿಂದ 200 ಮತ್ತು ಚಿಕ್ಕಬಳ್ಳಾಪುರದಿಂದ 152 ಸೋಂಕಿತರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com