

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮಹಾಮಾರಿ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 9 ಸಾವಿರ ಗಡಿಯತ್ತ ಸಾಗುತ್ತಿದೆ. ಹೀಗಾಗಿ ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ಮತ್ತಷ್ಟು ತಂತ್ರಗಳನ್ನು ರೂಪಿಸಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಕೊರೋನಾ ನಿಯೋಜಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ರೂಪಿಸಲಾಗಿರುವ ತಂತ್ರಗಳನ್ನು ಬದಲಿಸಿದ್ದಾರೆಂದು ತಿಳಿದುಬಂದಿದೆ.
ಈಗಾಗಲೇ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೀಗೆಯೇ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.
ಕೊರೋನಾ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿ ಚಿಕಿತ್ಸೆಗಳ ತಂತ್ರಗಳನ್ನು ಬದಲಿಸಬೇಕಿದೆ. ಲಕ್ಷಣಗಳು ಕಂಡು ಕೂಡಲೇ ನಿರ್ದಿಷ್ಟ ಆರೋಗ್ಯ ಕೇಂದ್ರಗಳಿಗೆ ಅವರನ್ನು ಸ್ಥಳಾಂತರಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ ಬಾಬು ಅವರು ಹೇಳಿದ್ದಾರೆ.
ಸೋಂಕಿತ ವ್ಯಕ್ತಿಗಳಿಗೆ ಯಾವ ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್ ಹಾಗೂ ಐಸಿಯು ವ್ಯವಸ್ಥೆಗಳಿವೆ ಎಂಬುದು ಸುಲಭವಾಗಿ ತಿಳಿಯುವಂತೆ ಸರ್ಕಾರ ಮಾಡಬೇಕು. ಈಗಾಗಲೇ ಈ ಕುರಿತು ಸಾಕಷ್ಟು ಆಸ್ಪತ್ರೆಗಳಲ್ಲಿ ಗೊಂದಲಗಳಿವೆ. ಇದರಿಂದ ಚಿಕಿತ್ಸೆಗಳು ತಡವಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬೆಂಗಳೂರಿನ ಮತ್ತೊಬ್ಬ ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಮಾತನಾಡಿ, ಲಕ್ಷಣ ಇರುವ ಹಾಗೂ ಲಕ್ಷಣ ರಹಿತ, ಐಎಲ್ಐ ಪ್ರಕರಣಗಳಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕೆಂಬುದರ ಕುರಿತು ಎಲ್ಲಾ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತದೆ. ಲಕ್ಷಣಗಳು ಪತ್ತೆಯಾಗುತ್ತಿದ್ದಂತೆಯೇ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರ ಮಾಡುವ ಕಾರ್ಯಗಳು ನಡೆಯುತ್ತವೆ. ಇದು ಸರ್ಕಾರಿ ಆಸ್ಪತ್ರೆಗಳ ಮೇಲಿನ ಹೊರೆಯನ್ನು ತಪ್ಪಿಸುತ್ತದೆ ಎಂದು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ವ್ಯವಸ್ಥೆಗಳು ಕಡಿಮೆಯಿದೆ. ಖಾಸಗಿ ಆಸ್ಪತ್ರೆಗಳನ್ನೂ ಕಾರ್ಯನಿಯೋಜನೆಗೊಳಪಡಿಸುವುದರಿಂದ ಇದು ಸಹಾಯ ಮಾಡಲಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಎನ್.ಲೋಕೇಶ್ ಅವರು ಹೇಳಿದ್ದಾರೆ.