

ಬೆಂಗಳೂರು: ಕೊರೋನಾ ವೈರಸ್ ಸೋಂಕು ಭೀತಿಯಿಂದ ಇಟಲಿಯ ರೋಮ್ ನಲ್ಲಿ ಸಿಲುಕಿದ್ದ ಅರಣ್ಯ ಸಚಿವ ಆನಂದ್ ಸಿಂಗ್ ಅವರ ಪುತ್ರಿ ನಗರಕ್ಕೆ ವಾಪಸಾಗಿದ್ದಾರೆ.
ಬುಧವಾರ ಬೆಳಿಗ್ಗೆ ವಾಪಸಾಗಿದ್ದು, ಸೋಂಕು ಇಲ್ಲದಿದ್ದರೂ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಆಕೆಯನ್ನು ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. 14 ದಿನಗಳ ಕಾಲ ನಿಗಾವಹಿಸಲಾಗುತ್ತದೆ.
ಪುತ್ರಿ ಯಾರ ಜೊತೆಗೂ ಸಂಪರ್ಕ ಹೊಂದುವಂತಿಲ್ಲ. ಪ್ರತ್ಯೇಕ ಕೊಠಡಿ, ಪ್ರತ್ಯೇಕ ತಟ್ಟೆ-ಲೋಟ, ಪ್ರತ್ಯೇಕ ಟಾಯ್ಲೆಟ್ ಬಳಸಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿ ಕೂಡ ಪ್ರತಿನಿತ್ಯ ಎರಡು ಬಾರಿ ಕರೆ ಮಾಡುತ್ತಾರೆ. ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿರುತ್ತಾರೆ. ಸ್ವಲ್ಪ ಜ್ವರ, ಕೆಮ್ಮು, ನೆಗಡಿ ಲಕ್ಷಣಗಳು ಕಂಡು ಬಂದರೆ ಕೂಡಲೇ ಮಾಹಿತಿ ನೀಡಬೇಕೆಂದು ಸೂಚನೆ ನೀಡಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್ ಅವರು, ನನ್ನ ಮಗಳು ರೋಮ್ ನಲ್ಲಿ ಪ್ರತ್ಯೇಕ ಹೋಟೆಲ್ ನಲ್ಲಿ ಇದ್ದಳು. ಹಾಗಾಗಿ ಒಬ್ಬಳೇ ವಾಪಸ್ ಆಗಿದ್ದಾಳೆ. ಮನೆಯಲ್ಲಿ ಐಸೋಲೇಷನ್ ನಲ್ಲಿ ಇಡಲಾಗಿದೆ. ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಪ್ರಮಾಣಪತ್ರ ಕೊಟ್ಟಿದ್ದಾರೆ. ಆರೋಗ್ಯ ಇಲಾಖೆಯ ನಿರ್ದೇಶನ ಪಾಲಿಸಲಾಗಿದೆ. ಈಗಾಗಲೇ ಇಟಲಿಯಲ್ಲಿ ಸ್ಯಾಂಪಲ್ ಗಳನ್ನು ನೀಡಲಾಗಿತ್ತು. ಆ ವಿವರವನ್ನೂ ಆರೋಗ್ಯ ಇಲಾಖೆಗೆ ನೀಡಲಾಗಿದೆ. ಆಕೆಯನ್ನು ಪ್ರತ್ಯೇಕವಾಗಿಡಲು ವ್ಯವಸ್ಥೆ ಮಾಡಲಾಗಿದೆ. ನಾನು ಕೂಡ ಆಕೆಯ ಭೇಟಿ ಮಾಡಿಲ್ಲ. ದೂರವಾಣಿ ಮೂಲಕ ಮಾತುಕತೆ ನಡಸಿದ್ದೇನೆಂದು ತಿಳಿಸಿದ್ದಾರೆ.