ದಾವಣಗೆರೆಯಲ್ಲಿ ಕೊರೋನಾಗೆ ಮೊದಲ ಬಲಿ, ಕರ್ನಾಟಕದಲ್ಲಿ 23ಕ್ಕೇರಿದ ಸಾವಿನ ಸಂಖ್ಯೆ

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಾರಕ ಕೊರೋನಾ ವೈರಸ್ ಗೆ ಮೊದಲ ಬಲಿಯಾಗಿದ್ದು, 69 ವರ್ಷದ ವೃದ್ಧರೊಬ್ಬರು ಇಂದು ಮೃತಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಾರಕ ಕೊರೋನಾ ವೈರಸ್ ಗೆ ಮೊದಲ ಬಲಿಯಾಗಿದ್ದು, 69 ವರ್ಷದ ವೃದ್ಧರೊಬ್ಬರು ಇಂದು ಮೃತಪಟ್ಟಿದ್ದಾರೆ.

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ(ರೋಗಿ ಸಂಖ್ಯೆ 556) ಇಂದು ರಾತ್ರಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

ಜಾಲಿನಗರದ ನಿವಾಸಿಯಾಗಿದ್ದ ವ್ಯಕ್ತಿ ಮೂರು ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಈ ವ್ಯಕ್ತಿಗೆ ಕೊರೋನಾ ಹೇಗೆ ಬಂದಿದೆ ಎನ್ನುವುದು ತಿಳಿದಿಲ್ಲ. ವೃದ್ಧನ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈ ವ್ಯಕ್ತಿಯಿಂದ 1 ವರ್ಷದ  ಮಗು ಸೇರಿದಂತೆ 5 ಮಂದಿಗೆ ಕೊರೋನಾ ಹರಡಿದೆ. ವೃದ್ಧನ ಮೂರು ಮಂದಿ ಸೊಸೆಯಂದಿರು, ಓರ್ವ ಪುತ್ರ ಸೇರಿ ಒಂದು ವರ್ಷದ ಮೊಮ್ಮಗನಿಗೂ ಕೂಡ ಸೋಂಕು ತಗುಲಿದ್ದು ಎಲ್ಲರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ದಾವಣಗೆರೆ ಡಿಸಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.

ಈ ನಡುವೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಪರ್ಕ ಹೊಂದಿದ್ದ ಸುಮಾರು 82 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಶನಿವಾರ ಅವರ ವರದಿ ಕೂಡ ಬಿಡುಗಡೆಯಾಗುವ ಸಾಧ್ಯತೆಯಿದೆ. ಇಲ್ಲಿಯವರೆಗೆ ದಾವಣಗೆರೆಯಲ್ಲಿ 10 ಮಂದಿಗೆ ಕೊರೋನಾ ಬಂದಿದ್ದು, ಇಬ್ಬರು  ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ದಿನ 24 ಮಂದಿಗೆ ಪಾಸಿಟಿವ್, ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆ
ಇನ್ನು ಶುಕ್ರವಾರ ಒಂದೇ ದಿನ 24 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ಇಂದು ಬೆಳಗ್ಗೆ 11 ಹೊಸ ಕೊವಿಡ್-19 ಪ್ರಕರಣ ಪತ್ತೆಯಾಗಿದ್ದು, ಸಂಜೆ ಮತ್ತೆ 13 ಮಂದಿಗೆ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಮತ್ತು  ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 589 ಸೋಂಕಿತರ ಪೈಕಿ 23 ಮಂದಿ ಮೃತಪಟ್ಟಿದ್ದು, 251 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಈ ಮಾಹಿತಿ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com