

ಬೆಂಗಳೂರು: ಬೆಂಗಳೂರಿನ ಪಾದರಾಯನಪುರ ವಾರ್ಡ್'ನಲ್ಲಿ ರ್ಯಾಂಡಮ್ ಪರೀಕ್ಷೆ ವೇಳೆ 6 ಮಂದಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ವಾರ್ಡ್ ನಲ್ಲಿರುವ ಎಲ್ಲರನ್ನೂ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಪ್ರಸ್ತುತ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕದಿಂದ ಕ್ವಾರಂಟೈನ್ ಆದವರನ್ನು ಹೊರಡುಪತಿಸಿ ವಾರ್ಡ್ ನಲ್ಲಿ ರ್ಯಾಪಿಡ್ ಪರೀಕ್ಷೆ ಒಳಪಡಿಸಿದ 188 ಮಂದಿಯ ಮಾದರಿ ಪರೀಕ್ಷೆಯಲ್ಲಿ 6 ಮಂದಿಗೆ ಸೋಂಕು ದೃಢಪಟ್ಟಿದೆ.
ಉಳಿದಂತೆ ಇನ್ನೂ 26 ಪರೀಕ್ಷೆಗಳ ವರದಿ ಬರುವುದು ಬಾಕಿ ುಳಿದಿದ್ದು, ಯಾವುದೇ ಸಂಪರ್ಕ ಇಲ್ಲದಿದ್ದರೂ ಸೀಲ್ ಡೌನ್ ಆಗಿರುವ ವಾರ್ಡ್ ನಲ್ಲಿ ಆರು ಮಂದಿಗೆ ಸೋಂಕು ಉಂಟಾಗಿದೆ. ಇದರಲ್ಲಿ ಒಬ್ಬ ತರಕಾರಿ ವ್ಯಾಪಾರಿಯೂ ಇದ್ದುದ್ದರಿಂದ ಪಾದರಾಯನಪುರ ವಾರ್ಡ್ ನಲ್ಲಿ ಇನ್ನೂ ಹೆಚ್ಚು ಮಂದಿಗೆ ಸೋಂಕು ಉಂಟಾಗಿರಬಹುದು. ಹೀಗಾಗಿ ಸಾಮೂಹಿಕ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ನೀಲನಕ್ಷೆ ಸಿದ್ಧಪಡಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳು ಸೋಮವಾರದಿಂದ ಇಡೀ ಪಾದರಾಯನಪುರದ ಜನರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆ ನಡೆಸಲಿದ್ದಾರೆ. ಜೆ.ಜೆ.ನಗರದಲ್ಲಿ ಕೊರೋನಾ ಸೋಂಕು ಪರೀಕ್ಷಾ ಕೇಂದ್ರವನ್ನು ಆರಂಭಿಸಲು ತಯಾರಿ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ಮಾಹಿತಿಗಳು ತಿಳಿದುಬಂದಿದೆ.
ಇಂದು ನಡೆಯುವ ಸಭೆಯಲ್ಲಿ ಆರೋಗ್ಯಾಧಿಕಾರಿಗಳು ಹೇಗೆ ಪರೀಕ್ಷೆ ನಡೆಸಬೇಕು. ಸಿಬ್ಬಂದಿ ಬಳಕೆ, ಭದ್ರತೆ ಸೇರಿದಂತೆ ಇನ್ನಿತರೆ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಿದ್ದಾರೆಂದು ತಿಳಿದುಬಂದಿದೆ.