

ಬೆಂಗಳೂರು: ಕೊರೋನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಎಚ್‌ಬಿಆರ್ ಬಡಾವಣೆಯ 57 ವರ್ಷದ ಮಹಿಳೆಯೊಬ್ಬರು ಕಲ್ಯಾಣನಗರದ ‘ನಾರ್ತ್ ಬೆಂಗಳೂರು ನರ್ಸಿಂಗ್ ಹೋಂ’ನಲ್ಲಿ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ.
ಆದರೆ, ಈ ಮಹಿಳೆಗೆ ಕೊರೋನಾ ಸೋಂಕು ಇರುವುದು ಆಕೆ ಮೃತಪಟ್ಟ ನಂತರ ಪತ್ತೆಯಾಗಿದೆ. ಆಕೆಯ ಗಂಟಲ ದ್ರವದ ಪರೀಕ್ಷೆ ಮತ್ತು ಎಕ್ಸ್ ರೇ ವರದಿಗಳನ್ನು ಪರಿಶೀಲಿಸಿದಾಗ ಆಕೆಗೆ ಸೋಂಕು ಇರುವುದು ದೃಢಪಟ್ಟಿದೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಗರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ತಂಡ ನರ್ಸಿಂಗ್ ಹೋಂ ಮತ್ತು ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್ ಮಾಡಿದೆ.