ವಲಸೆ ಕಾರ್ಮಿಕರ ವಿಚಾರದಲ್ಲಿ ಕರ್ನಾಟಕ ಯಾವುದೇ ಒತ್ತಡಕ್ಕೂ ಒಳಗಾಗಿಲ್ಲ: ಸಚಿವ ಸುರೇಶ್ ಕುಮಾರ್

ವಲಸೆ ಕಾರ್ಮಿಕರು ಕರೆದುಕೊಳ್ಳಲು ಇತರೆ ರಾಜ್ಯಗಳು ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡಿರದ ಕಾರಣ ರಾಜ್ಯ ಸರ್ಕಾರ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ವಲಸೆ ಕಾರ್ಮಿಕರ ವಿಚಾರದಲ್ಲಿ ಕರ್ನಾಟಕ ಸರ್ಕಾರ ಯಾವುದೇ ಒತ್ತಡಕ್ಕೂ ಒಳಗಾಗಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ. 
ಸುರೇಶ್ ಕುಮಾರ್
ಸುರೇಶ್ ಕುಮಾರ್
Updated on: 

ಬೆಂಗಳೂರು: ವಲಸೆ ಕಾರ್ಮಿಕರು ಕರೆದುಕೊಳ್ಳಲು ಇತರೆ ರಾಜ್ಯಗಳು ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡಿರದ ಕಾರಣ ರಾಜ್ಯ ಸರ್ಕಾರ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ವಲಸೆ ಕಾರ್ಮಿಕರ ವಿಚಾರದಲ್ಲಿ ಕರ್ನಾಟಕ ಸರ್ಕಾರ ಯಾವುದೇ ಒತ್ತಡಕ್ಕೂ ಒಳಗಾಗಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ವಲಸೆ ಕಾರ್ಮಿಕರು ತಮ್ಮ ತಮ್ಮ ಕುಟುಂಬಸ್ಥರನ್ನು ನೋಡಲು ಇಚ್ಛಿಸಿದ್ದು, ಸರ್ಕಾರವಾಗಲೀ, ಕಟ್ಟಡ ನಿರ್ಮಾಣಕಾರರಾಗಲೀ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಪರಿಸ್ಥಿತಿ ಪ್ರಮಾಣ ನಿರೀಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆಯೇ? 
ಖಂಡಿತ ಇಲ್ಲ. ಸಂವಹನ ಸಮಸ್ಯೆಯಿಂದಾಗಿ ಇಂತಹ ಬಿಕ್ಕಟ್ಟಿಗೆ ಕಾರಣವಾಗಿದೆ. ಆದರೆ, ತಮ್ಮ ತಮ್ಮ ತವರಿಗೆ ಮರಳಲು ಇಚ್ಛಿಸುತ್ತಿರುವ ವಲಸೆ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸಲು ಕ್ರಮಗಳನ್ನು ಕೈಗೊಂಡಿದ್ದೇವೆ. ವಲಸೆ ಕಾರ್ಮಿಕರೊಂದಿಗೆ ಹಿರಿಯ ಅಧಿಕಾರಿಗಳೂ ಕೂಡ ತೆರಳುತ್ತಿದ್ದಾರೆ. ಬೆಂಗಳೂರಿನ ಬೃಹತ್ ಕಟ್ಟಡ ನಿರ್ಮಾಣ ಸ್ಥಳಗಳಿಗೆ ನಾನೂ ಭೇಟಿ ನೀಡಿದ್ದೇವೆ. ವದಂತಿಗಳಿಗೆ ಕಿವಿಗೊಡದಂತೆ ಕಾರ್ಮಿಕರ ಬಳಿ ಮನವಿ ಮಾಡಿಕೊಂಡಿದ್ದೇವೆ. ವಲಸೆ ಕಾರ್ಮಿಕರಿಗಾಗಿ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. 

ರೈಲುಗಳ ಮೂಲಕ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸಲು ನಾವು ನಿರ್ಧರಿಸಿದ್ದೇವೆ. ಆದರೆ, ನೆರೆ ರಾಜ್ಯಗಳೇ ವಲಸೆ ಕಾರ್ಮಿಕರನ್ನು ಕರೆದುಕೊಳ್ಳಲು ಸಿದ್ಧವಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ರೈಲು ಸಂಚಾರವನ್ನು ಬಂದ್ ಮಾಡಲಾಗಿದೆ. 

ರೈಲುಗಳ ಸಂಚಾರವನ್ನೇಕೆ ನಿಲ್ಲಿಸಲಾಯಿತು?
ಕಟ್ಟಡ ನಿರ್ಮಾಣಕಾರರ ಒತ್ತಡಕ್ಕೆ ಮಣಿದು ಸರ್ಕಾರ ರೈಲು ಸಂಚಾರ ನಿಲ್ಲಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ವಲಸೆ ಕಾರ್ಮಿಕರ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೂ ಒಳಗಾಗಿಲ್ಲ. ಕಾರ್ಮಿಕರು ನಿರ್ಮಾಣ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡುವಂತೆ ಕೇಳಿದ್ದರು. ಇದಕ್ಕೆ ಒಪ್ಪಿಗೆ ನೀಡಿದ್ದೆವು. ಎರಡು ರಾಜ್ಯಗಳಿಗೆ ಕಾರ್ಮಿಕರನ್ನು ಕಳುಹಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ, ಆ ರಾಜ್ಯಗಳೇ ಅವರನ್ನು ಸೇರ್ಪಡೆಗೊಳಿಸಿಕೊಳ್ಳಲು ನಿರಾಕರಿಸುತ್ತಿವೆ. ಹೀಗಾಗಿ ನಾವು ರೈಲುಗಳ ಸಂಚಾರವನ್ನು ನಿಲ್ಲಿಸಿದ್ದೇವೆ. 

ವಲಸೆ ಕಾರ್ಮಿಕರಿಗೆ ಶುಲ್ಕ ವಿಧಿಸಲಾಗುತ್ತಿದೆಯೇ?
ತ್ರಿಪುರ ಬಿಟ್ಟರೆ ಯಾವುದೇ ರಾಜ್ಯ ವಲಸೆ ಕಾರ್ಮಿಕರ ಶುಲ್ಕವನ್ನು ಭರಿಸುತ್ತಿಲ್ಲ. ಸುಮಾರು 1.10 ಲಕ್ಷ ಕಾರ್ಮಿಕರನ್ನು ನಾವು ಅವರವರ ತವರು ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದೇವೆ. ಇದೇ ರೀತಿ ಎಲ್ಲಾ ರಾಜ್ಯಗಳ ಕಾರ್ಮಿಕರಿಗೂ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ರೈಲ್ವೇ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗಿದ್ದು, ಪ್ರತೀ ಟಿಕೆಟ್ ಗಳಿಗೆ ಶೇ.85ರಷ್ಟು ಸಬ್ಸಿಡಿ ನೀಡಲು ಸಿದ್ಧ ಎಂದು ಹೇಳಿದ್ದಾರೆ. 

ಕೆಲ ಕಟ್ಟಡ ನಿರ್ಮಾಣಕಾರರು ಬಲವಂತವಾಗಿ ಕಾರ್ಮಿಕರನ್ನು ಇರಿಸಿಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿವೆ?
ಪ್ರಸ್ತುತ ಪರಿಸ್ಥಿತಿಯಲ್ಲಿ ಕಟ್ಟಡ ನಿರ್ಮಾಣಕಾರರು ಕಾರ್ಮಿಕರನ್ನು ತಮ್ಮೊಂದಿಗೆ ಇರಿಸಿಕೊಂಡರೂ ಕೂಡ ಅವರ ಕೆಲಸಗಳೇನೂ ಪೂರ್ಣಗೊಳ್ಳುವುದಿಲ್ಲ. ಪರಿಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸುತ್ತದೆಯಷ್ಟೇ. ವಲಸೆ ಕಾರ್ಮಿಕರು ಕೆಲ ದಿನಗಳ ಬಳಿಕ ಮರಳಿ ಬರುತ್ತಾರೆ. ಇದೀಗ ಅವರು ತಮ್ಮ ಕುಟುಂಬ ಸದಸ್ಯರನ್ನು ನೋಡಲು ಇಚ್ಛಿಸುತ್ತಿದ್ದಾರೆ. ಅವರನ್ನು ಸರ್ಕಾರವಾಗಲೀ, ಕಟ್ಟಡ ನಿರ್ಮಾಣಕಾರರಾಗಲೀ ತಡೆಯಲು ಸಾಧ್ಯವಿಲ್ಲ. 

ಕರ್ನಾಟಕದ ವಲಸೆ ಕಾರ್ಮೀಕರೂ ಕೂಡ ನಾಡಿಗೆ ಬರಲು ಇಚ್ಛಿಸುತ್ತಿದ್ದಾರೆ. ಈ ಬಗ್ಗೆ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ?
ವಲಸೆ ಕಾರ್ಮಿಕರು ತವರಿಗೆ ಬರುತ್ತಿದ್ದಂತೆಯೇ ಕೇಂದ್ರ ಸರ್ಕಾರ ಮಾರ್ಗಸೂಚಿಗಳಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com