

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಪತ್ತೆ ಹಚ್ಚುವ ಪರೀಕ್ಷೆಯಲ್ಲಿ ಏರಿಕೆಯೊಂದಿಗೆ ಸೋಂಕಿತರ ಪ್ರಮಾಣ ಕೂಡ ಹೆಚ್ಚಾಗತೊಡಗಿದ್ದು, ರಾಜ್ಯದಲ್ಲಿ ಎರಡನೇ ಬಾರಿಗೆ 10,000ಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದೆ. ಇದರೊಂದಿಗೆ ರಾಜ್ಯವಾರು ಅತೀ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನವನ್ನು ಪಡೆದುಕೊಂಡಿದೆ.
ನಿನ್ನೆ ಒಂದೇ ದಿನ ರಾಜ್ಯದಲ್ಲಿ 10,070 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಂದೇ ದಿನ 96,588 ಮಂದಿಯ ಸ್ಯಾಂಪಲ್ಸ್ ಗಳನ್ನು ಪರೀಕ್ಷೆ ನಡೆಸಲಾಗಿದೆ. ಇನ್ನು ಕೊರೋನಾ ಮಹಾಮಾರಿಗೆ 130 ಜನರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಸೆಪ್ಟೆಂಬರ್ 29ರಂದು 10,453 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಈ ವರೆಗಿನ ದಾಖಲೆಯಾಗಿತ್ತು. ಈ ವರೆಗೆ ಕೊರೋನಾ ಸೋಂಕಿನಿಂದ ರಾಜ್ಯದಲ್ಲಿ 4,92,412 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಕೊಟೋನಾ ಪರೀಕ್ಷೆಗಳ ಸಂಖ್ಯೆ 49,97,671 ತಲುಪಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 6.11ಲಕ್ಷ ಮುಟ್ಟಿದೆ. ರಾಜ್ಯದಲ್ಲಿ 1.10 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಇವರಲ್ಲಿ 811 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಮತ್ತಷ್ಟು ಅಬ್ಬರಿಸಿದ್ದು, ನಿನ್ನೆ ಒಂದೇ ದಿನ 4,853 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ವರೆಗೆ ಸೋಂಕಿಗೆ ತುತ್ತಾದವರ ಸಂಖ್ಯೆ 2,37,516ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸೋಂಕಿನಿಂದ 60 ವರ್ಷಕ್ಕಿಂತ ಮೇಲ್ಪಟ್ಟವರು ಶೇ.6.3ರಷ್ಟು ಸಾವನ್ನಪ್ಪಿದ್ದರೆ, 51-60 ವರ್ಷದೊಳಗಿನವರು ಶೇ.2.8ರಷ್ಟು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಆರೋಗ್ಯ ಇಲಾಖೆ ಗುರುವಾರ ಪ್ರಕಟಿಸಿರುವ ಸಕ್ರಿಯ ಪ್ರಮಾಣದ ವರದಿ ಮಾಹಿತಿ ನೀಡಿದ್ದು, ವರದಿಯಲ್ಲಿ ಸೆಪ್ಟೆಂಬರ್ 27 ರಂದು 12.54%, ಸೆಪ್ಟೆಂಬರ್ 28 ರಂದು 12.34%, ಸೆಪ್ಟೆಂಬರ್ 29 ರಂದು 12.33% ಮತ್ತು ಸೆಪ್ಟೆಂಬರ್ 30 ರಂದು 12.27% ರಿಂದ ಸ್ಥಿರವಾಗಿ ಕುಸಿದಿರುವುದು ಕಂಡು ಬಂದಿದೆ. ಇದರೊಂದಿಗೆ ಮರಣ ಪ್ರಮಾಣ ಕೂಡ ಕುಸಿತ ಕಂಡಿದ್ದು, ಗುರುವಾರದವರೆಗೆ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1.46 ಇರುವುದು ಕಂಡು ಬಂದಿದೆ.