

ಮೈಸೂರು: ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ 18 ನಗರಗಳಲ್ಲಿ ನಡೆಸಿದ ಸಮೀಕ್ಷೆಯಿಂದ, ಉಸಿರಾಟದ ತೊಂದರೆಯಿಂದಾಗಿ ಮೈಸೂರು ಮತ್ತು ಬೆಂಗಳೂರುಗಳಲ್ಲಿ ಶೇಕಡಾ 53 ಮಂದಿ ಮಾಸ್ಕ್ ಧರಿಸುವುದಿಲ್ಲ ಎಂದು ತಿಳಿದುಬಂದಿದೆ.
ಕೊರೋನಾ ವೈರಸ್ ತಡೆಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು ಏಕ್ ದೇಶ್ ಅಭಿಯಾನದಡಿ ಅಪ್ನಾಮಾಸ್ಕ್ ನಡೆಸಿರುವ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮೈಸೂರುಗಳಲ್ಲಿ ಮಾತ್ರ ಅಂಕಿಅಂಶ ಸಂಗ್ರಹಿಸಿದೆ.
ಕರ್ನಾಟಕದಲ್ಲಿ ಈ ಎರಡು ನಗರಗಳಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರ, ಪ್ರತಿಕ್ರಿಯೆಗೆ ಸಿಕ್ಕವರಲ್ಲಿ ಶೇಕಡಾ 94 ಮಂದಿ ಮಾಸ್ಕ್ ಧರಿಸುತ್ತಾರೆ. ಶೇಕಡಾ 81ರಷ್ಟು ಮಂದಿ ಮಾಸ್ಕ್ ಧರಿಸುವುದು ಕೋವಿಡ್-19 ತಡೆಗಟ್ಟಲು ಅತ್ಯಂತ ಅಗತ್ಯ ಎಂದು ನಂಬುತ್ತಾರೆ, ಸೋಂಕಿತ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ವೈರಸ್ ಹರಡುವುದನ್ನು ಇದು ತಡೆಗಟ್ಟುತ್ತದೆ ಎಂದು ಜನರು ನಂಬುತ್ತಾರೆ, ಇನ್ನು ಶೇಕಡಾ 53ರಷ್ಟು ಮಂದಿ ಉಸಿರಾಟದ ತೊಂದರೆಯಿಂದ ಮಾಸ್ಕ್ ಧರಿಸುವುದಿಲ್ಲ ಎಂದು ತಿಳಿದುಬಂದಿದೆ.
ಶೇಕಡಾ 59 ಮಂದಿ ಎನ್ 95 ಮಾಸ್ಕ್ ಬದಲಿಗೆ ಬಟ್ಟೆಯಿಂದ ಮಾಡಿದ ಮಾಸ್ಕ್ ಗಳನ್ನು ಧರಿಸುತ್ತಾರೆ. ಕೆಲಸ ಮಾಡುವ ಸಂದರ್ಭಗಳಲ್ಲಿ ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಲು ಶೇಕಡಾ 53 ಮಂದಿ ಬಯಸುತ್ತಾರೆ. ಇನ್ನು ಮಾರುಕಟ್ಟೆಗಳಲ್ಲಿ ಅಥವಾ ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಶೇಕಡಾ 54 ಮಂದಿ ಬಯಸುತ್ತಾರೆ. ಫೇಸ್ ಮಾಸ್ಕ್ ಧರಿಸುವಾಗ ಮುಖ ಬಾಯಿ ಮತ್ತು ಮೂಗು ಮುಚ್ಚಬೇಕು ಎಂದು ಶೇಕಡಾ 81 ಮಂದಿ ಅಪೇಕ್ಷಿಸುತ್ತಿದ್ದರೆ, ಶೇಕಡಾ 68 ಮಂದಿ ಬಿಸಾಕುವ ಬದಲು ಫೇಸ್ ಮಾಸ್ಕ್ ನ್ನು ಸೋಪ್ ಮತ್ತು ನೀರಿನಿಂದ ತೊಳೆದು ಮರುಬಳಕೆ ಮಾಡುತ್ತಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಶ್ರೀಮಂತ ಮತ್ತು ಅತಿ ಶ್ರೀಮಂತ ವ್ಯಕ್ತಿಗಳು ಎನ್ 95 ಮಾಸ್ಕ್ ನ್ನು ಹೆಚ್ಚು ಬಳಸುತ್ತಾರೆ. ಮಾಸ್ಕ್ ಜೊತೆಗೆ ಫೇಸ್ ಶೀಲ್ಡ್ ಧರಿಸಿದರೆ ಉತ್ತಮ ಎಂದು ಶೇಕಡಾ 21ರಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.