ಕೊರೋನಾಂತಕ ನಡುವೆಯೇ ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭ, ಸೋಂಕು ಭೀತಿಯಿಂದ ಹಲವರು ಗೈರು ಹಾಜರು ಸಾಧ್ಯತೆ

ರಾಜ್ಯದಲ್ಲಿ ಕೊರೋನಾ ಆಬ್ಬರದ ನಡುವೆ ವಿಧಾನಮಂಡಲದ ಅಧಿವೇಶನವು ಭಾರೀ ಮುಂಜಾಗ್ರತಾ ಕ್ರಮಗಳ ನಡುವೆ ಹೊಸ ಬಗೆಯಲ್ಲಿ ಸೋಮವಾರದಿಂದ ಆರಂಭವಾಗಲಿದೆ. ಅಧಿವೇಶನ ಹತ್ತಿರವಾಗುತ್ತಿದ್ದಂತೆಯೇ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಸೇರಿ ಮೂವರು ನಾಯಕರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಬಾರಿ ಅಧಿವೇಶನದಲ್ಲಿ ಸೋಂಕು ಹರಡುವ ಭೀತಿಯಿಂದಲೇ ಹಲವು ನಾಯಕರು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆಬ್ಬರದ ನಡುವೆ ವಿಧಾನಮಂಡಲದ ಅಧಿವೇಶನವು ಭಾರೀ ಮುಂಜಾಗ್ರತಾ ಕ್ರಮಗಳ ನಡುವೆ ಹೊಸ ಬಗೆಯಲ್ಲಿ ಸೋಮವಾರದಿಂದ ಆರಂಭವಾಗಲಿದೆ. ಅಧಿವೇಶನ ಹತ್ತಿರವಾಗುತ್ತಿದ್ದಂತೆಯೇ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಸೇರಿ ಮೂವರು ನಾಯಕರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಬಾರಿ ಅಧಿವೇಶನದಲ್ಲಿ ಸೋಂಕು ಹರಡುವ ಭೀತಿಯಿಂದಲೇ ಹಲವು ನಾಯಕು ಗೈರು ಹಾಜರಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಕಳೆದ ಒಂದು ವಾರದಿಂದ ಈಚೆಗೆ ಪ್ರಮುಖ ಸಚಿವರಾದ ಬಸವರಾಜ ಬೊಮ್ಮಾಯಿ, ಭೈರತಿ ಬಸವರಾಜು, ಎನ್.ಗೋಪಾಲಯ್ಯ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಅಲ್ಲದೆ. ಪಿರಿಯಾಪಟ್ಟಣ ಶಾಸಕ ಕೆ.ಮಹದೇವ, ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿ ಶಂಕರ್, ಉಪಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಹುಣಸೂರು ಶಾಸಕ ಎಚ್.ಪಿ.ಮುಂಜುನಾಥ್ ಸೇರಿ ಹಲವು ಶಾಸಕರಿಗೆ ಈಗಾಗಲೇ ಸೋಂಕು ದೃಢಪಟ್ಟು ಚಿಕಿತ್ಸೆಯಲ್ಲಿದ್ದಾರೆ. ಅಂದರೆ, 12 ಶಾಸಕರಲ್ಲಿ ಕೊರೋನಾ ಸಕ್ರಿಯವಾಗಿದೆ. 

ಶನಿವಾರ ಡಾ.ಸಿಎನ್.ಅಶ್ವತ್ಥನಾರಾಯಣ, ಎಂ.ಪಿ.ಕುಮಾರಸ್ವಾಮಿ. ಪ್ರಿಯಾಂಕ ಖರ್ಗೆಯವರಿಗೆ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಭಾನುವಾರವೂ ವಿಧಾನಸೌಧದಲ್ಲಿ ಶಾಸಕರು ಹಾಗೂ ಪರಿಷತ್ ಸದಸ್ಯರ ಪರೀಕ್ಷೆಯು ಮುಂದುವರೆಯಲಿದೆ. ಬಹುತೇಕರಿಗೆ ಆ್ಯಂಟಿಜೆನ್ ಪರೀಕ್ಷೆ ಮಾಡದೇ ಬರೀ ಆರ್'ಟಿ-ಪಿಸಿಆರ್ ಪರೀಕ್ಷೆ ಮಾತ್ರ ನಡೆಸಿದ್ದು, ಭಾನುವಾರ ಸಂಜೆಯೊಳಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಸಿಬ್ಬಂದಿಯ ಸುಮಾರು 1 ಸಾವಿರ ಮಂದಿಯ ಆರ್'ಟಿ-ಪಿಸಿಆರ್ ಪರೀಕ್ಷಾ ವರದಿಗಳು ಬರಲಿದ್ದು, ಸೋಂಕಿತರ ಸಂಖ್ಯೆ ಉಲ್ಪಣವಾಗುವ ಸಾಧ್ಯತೆಗಳಿವೆ. ಇದರಿಂದ ಅಧಿವೇಶನದ ಮೇಲೆ ಕೊರೋನಾ ಕರಿನೆರಳು ಬೀರುವ ಸಾಧ್ಯತೆ ದಟ್ಟವಾಗಿದೆ. 

ಅಧಿವೇಶನದಲ್ಲಿ ಪಾಲ್ಗೊಳ್ಳಲಿರುವ ಬಹುತೇಕ ನಾಯಕರು 60 ವರ್ಷಕ್ಕಿಂತ ಮೇಲ್ಪಟ್ಟವರೇ ಆಗಿದ್ದು, ಇದರ ಪರಿಣಾಮ ಸೋಂಕು ತಗಲುವ ಭೀತಿಯಿಂದಾಗಿ ಹಲವು ನಾಯಕರು ಗೈರು ಹಾಜರಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸೇರಿದಂತೆ 50-60 ಶಾಸಕರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಪರೀಕ್ಷೆಗೊಳಗಾಗಿರುವ ಮತ್ತಷ್ಟು ನಾಯಕರ ವೈದ್ಯಕೀಯ ವರದಿ ಸೋಮವಾರ ಬರಲಿದ್ದು, ಸೋಂಕಿತರ ಸಂಖ್ಯೆ ಅಂತಿಮವಾಗಿ ತಿಳಿದುಬರಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಆರು ತಿಂಗಳ ನಂತರ ನಡೆಯುತ್ತಿರುವ ಅಭಿವೇಶನದಲ್ಲಿ ಸದಸ್ಯರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳ ಸುರಕ್ಷತೆಗೆ ವಿವಿಧ ರೀತಿಯ ಸುರಕ್ಷತಾ ವ್ಯವಸ್ಥೆಯನ್ನು ಮಾಡಲಾಗಿದೆ. ಹಲವು ನಿರ್ಬಂಧಗಳನ್ನೂ ವಿಧಿಸಲಾಗಿದೆ. ಹೆಚ್ಚು ಕಡಿಮೆ ಒಂದು ತಿಂಗಳಿಂದಲೇ ಸದಸ್ಯರ ಆಸನದ ನಡುವೆ ಅಂತರ ಕಾಪಾಡಲು ಪಾರದರ್ಶಕ ಫೈಬರ್ ಶೀಟ್ ಪರದೆ ಅಳವಡಿಸಲಾಗಿದೆ. ಈ ಬಾಗಿ ಮಾಧ್ಯಮ ಪ್ರತಿನಿಧಿಗಳ ಗ್ಯಾಲರಿಯನ್ನು ಸಾರ್ವಜನಿಕರ ಗ್ಯಾಲರಿಗೆ ವರ್ಗಾಯಿಸಲಾಗಿದೆ. ಹೀಗಾಗಿ ಸಭಾಧ್ಯಕ್ಷರು/ಸಭಾಪತಿಗಳ ಬಲಭಾಗದಲ್ಲಿನ ಗ್ಯಾಲರಿಯನ್ನು ಪ್ರಧಾನ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೆ ಮೀಸಲಿಡಲಾಗಿದೆ. ಅಧೀನ ಕಾರ್ಯದರ್ಶಿಗಿಂತ ಕೆಳಗಿರುವ ಅಧಿಕಾರಿಗಳಿಗೆ ಸಹ ಗ್ಯಾಲರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com