ಬೆಂಗಳೂರು: ಫೇಸ್‍ಬುಕ್‍ನಲ್ಲಿ ಪ್ರೀತಿಸುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದ ಆರೋಪಿಯ ಬಂಧನ

ಫೇಸ್ ಬುಕ್‍ನಲ್ಲಿ ನಕಲಿ ಖಾತೆ ತೆರೆದು ಯುವತಿಯರನ್ನು ಪ್ರೀತಿಸುವುದಾಗಿ ನಂಬಿಸಿ ನಂತರ ಹೆದರಿಸಿ ಅತ್ಯಾಚಾರವೆಸಗಿ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಫೇಸ್ ಬುಕ್‍ನಲ್ಲಿ ನಕಲಿ ಖಾತೆ ತೆರೆದು ಯುವತಿಯರನ್ನು ಪ್ರೀತಿಸುವುದಾಗಿ ನಂಬಿಸಿ ನಂತರ ಹೆದರಿಸಿ ಅತ್ಯಾಚಾರವೆಸಗಿ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಮೂಲದ ಅಭಿಷೇಕ್‍ ಗೌಡ ಎಂ. ಅಲಿಯಾಸ್ ಧನುಶ್ (26) ಬಂಧಿತ ಆರೋಪಿ. ಬಂಧಿತನಿಂದ 10.88 ಲಕ್ಷ ರೂ. ಬೆಲೆ ಬಾಳುವ 272 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ನಂದಿನಿಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ. 

ಇದೇ ತಿಂಗಳ 10ರಂದು ಸಂತ್ರಸ್ತೆಯ ತಾಯಿ ಜಯಲಕ್ಷ್ಮಿ ಎಂಬುವವರು ತಮ್ಮ 17 ವರ್ಷದ ಅಪ್ರಾಪ್ತ ಮಗಳನ್ನು ಅಭಿಷೇಕ್ ಗೌಡ ಎಂಬುವನು ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು ನಂದಿನಿಲೇಔಟ್ ಪಾರ್ಕ್‍ನಲ್ಲಿ ಭೇಟಿ ಮಾಡಿ ಪ್ರೀತಿ ಮಾಡುವುದಾಗಿ ಪುಸಲಾಯಿಸಿ, ನಂತರ ಕಷ್ಟವಿದೆ ಎಂದು ಆಕೆಯಿಂದ ಹಣ ಮತ್ತು ಚಿನ್ನದ ಒಡವೆಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದ. ನಂತರದ ದಿನಗಳಲ್ಲಿ ಆಕೆಯು ಹಣ ಮತ್ತು ಚಿನ್ನದ ಒಡವೆಗಳನ್ನು ವಾಪಸ್ಸು ನೀಡುವಂತೆ ಕೇಳಿದಾಗ, ಆಕೆಯನ್ನು ಪುಸಲಾಯಿಸಿ ಕರೆದುಕೊಂದು ಹೋಗಿ ಲಾಡ್ಜೊಂದರಲ್ಲಿ ಬಲವಂತವಾಗಿ ಅತ್ಯಾಚಾರವೆಸಗಿರುವುದಾಗಿ ಆರೋಪಿಸಿ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಅನ್ವಯ ಪೊಲೀಸರು ಅತ್ಯಾಚಾರ, ಸುಲಿಗೆ, ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಬಳಿಕ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಆರೋಪಿಯ ವಿರುದ್ಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ 2014 ನೇ ಸಾಲಿನ ಕೊಲೆ ಯತ್ನ ಪ್ರಕರಣದಲ್ಲಿ ರೌಡಿಪಟ್ಟಿಯನ್ನು ತೆರೆಯಲಾಗಿತ್ತು. ಅಲ್ಲದೇ, ಆರೋಪಿಯು ಫೇಸ್‍ಬುಕ್‍ನಲ್ಲಿ ಅಭಿಶೇಕ್‍ ಗೌಡ ಎಂಬ ಹೆಸರಿನ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದು ಅಮಾಯಕ ಹೆಣ್ಣು ಮಕ್ಕಳನ್ನು ಪರಿಚಯ ಮಾಡಿಕೊಂಡು ಅವರ ವಿಶ್ವಾಸ ಗಳಿಸಿ, ಪ್ರೀತಿಸುವಂತೆ ನಾಟಕವಾಡಿ, ದೈಹಿಕ ಸಂಪರ್ಕ ಬೆಳೆಸುವ ಹವ್ಯಾಸ ಹೊಂದಿದ್ದ ಎಂದು ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇನ್ನು, 2019ನೇ ಸಾಲಿನಿಂದ ಆರೋಪಿ ಅಪ್ರಾಪ್ತ ಬಾಲಕಿಯರನ್ನು ಅಭೀಶೇಕ್‍ ಗೌಡ ಎಂಬ ನಕಲಿ ಹೆಸರಿನ ಫೇಸ್‍ಬುಕ್ ಖಾತೆ ಮೂಲಕ ಪರಿಚಯ ಮಾಡಿಕೊಂಡು, ಪ್ರೀತಿ ಮಾಡುವ ನಾಟಕ ಮಾಡಿ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿರುವುದಾಗಿ ತಿಳಿಸಿದ್ದು, ನಕಲಿ ಫೇಸ್‍ಬುಕ್ ಖಾತೆಯಾದ ಆತ ಸುಮಾರು 2,314 ಜನ ಮಹಿಳೆಯರನ್ನು ಫೇಸ್‍ಬುಕ್ ಫ್ರೆಂಡ್ ಮಾಡಿಕೊಂಡು ನಂತರ ಅವರಿಗೆ ಮೆಸೆಂಜರ್ ನಲ್ಲಿ ಸಂದೇಶ ಕಳುಹಿಸಿ ಅವರ ಮೊಬೈಲ್ ನಂಬರ್ ಪಡೆದು ಸುಮಾರು 50 ಮಹಿಳೆಯರಿಗೆ ಪ್ರೀತಿಸುವ ನಾಟಕವಾಡಿ, ದೈಹಿಕ ಸಂಪರ್ಕ ಹೊಂದಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಲ್ಲದೇ, ಆರೋಪಿಗೆ ವೇಶ್ಯೆಯರ ಸಹವಾಸ ಮತ್ತು ಜೂಜಾಡುವ ಅಭ್ಯಾಸವಿದ್ದು, ಅಪ್ರಾಪ್ತ ಬಾಲಕಿ ಮತ್ತು ಆಕೆಯ ಮನೆಯಿಂದ ದೋಚಿಕೊಂಡು ಹೋಗಿದ್ದ ಚಿನ್ನಾಭರಣ ಮತ್ತು ಹಣವನ್ನು ತನ್ನ ದುಶ್ಚಟಗಳಿಗೆ ಬಳಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸಿಪಿ, ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ವಿ.ಧನಂಜಯ ಅವರ ನೇತೃತ್ವದಲ್ಲಿ ನಂದಿನಿಲೇಔಟ್ ಪೊಲೀಸ್ ಇನ್ಸ್‌ ಪೆಕ್ಟರ್ ಲೋಹಿತ್ ಬಿ.ಎನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com