

ಮಂಗಳೂರು: ಕೇರಳದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗಡಿ ಪ್ರದೇಶದಲ್ಲಿ ಮತ್ತಷ್ಟು ಕ್ರಮ ಕೈಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾಡಾಳಿತ ಮಂಡಳಿಯು, ದಕ್ಷಿಣ ಕನ್ನಡ- ಕಾಸರಗೋಡು ಗಡಿಗೆ ಹೊಂದಿಕೊಂಡ ಮದ್ಯದಂಗಡಿಗಳನ್ನು ಮುಚ್ಚಲು ಆದೇಶ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ನೀಡಿದ್ದು, ಕೇರಳದ ಗಡಿಭಾಗಕ್ಕೆ ಹೊಂದಿಕೊಂಡ 5 ಕಿ.ಮೀ ವ್ಯಾಪ್ತಿಯ ಮದ್ಯದಂಗಡಿ ಬಂದ್ ಮಾಡಲು ಆದೇಶಿಸಿದ್ದಾರೆ.
ಆದೇಶ ಹಿನ್ನೆಲೆಯಲ್ಲಿ ಇದೀಗ ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕಿನ ಗಡಿ ಭಾಗದ ಮದ್ಯದಂಗಡಿಗಳು ಬಂದ್ ಆಗಲಿವೆ. ಒಟ್ಟು 19 ಗ್ರಾಮಗಳ 29 ಮದ್ಯದಂಗಡಿಗಳ ಬಂದ್‌ಗೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ಆಗಸ್ಟ್ 15ರವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮದ್ಯಪ್ರಿಯರು ದಕ್ಷಿಣ ಕನ್ನಡ ಜಿಲ್ಲೆಯ ಮದ್ಯದಂಗಡಿಗಳನ್ನು ಅವಲಂಬಿಸಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ಆದೇಶವನ್ನು ಹೊರಡಿಸಿದೆ. ಜಿಲ್ಲಾಡಳಿತದ ಈ ನೂತನ ಆದೇಶ ಆಗಸ್ಟ್ 3ನೇ ತಾರೀಖಿನಿಂದ ಜಾರಿಯಲ್ಲಿದ್ದು, ಆಗಸ್ಟ್ 15ರವರೆಗೆ ಮದ್ಯದಂಗಡಿಗಳು ಮುಚ್ಚಲಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಅವರ ಈ ಆದೇಶವು ಗಡಿಭಾಗದ ಮದ್ಯಪ್ರಿಯರ ಕಣ್ಣು ಕೆಂಪಗಾಗುವಂತೆ ಮಾಡಿದೆ.
ತಲಪಾಡಿ ಗಡಿಭಾಗದಲ್ಲಿ ಕೇರಳ ಭಾಗದವರನ್ನು ಅಪರಾಧಿಗಳ ರೀತಿ ಕಾಣುವ ಜಿಲ್ಲಾಡಳಿತ, ಈಗ ಮದ್ಯದಂಗಡಿಗೆ ನಡೆದುಕೊಂಡು ಬರಲೂ ಬಿಡುತ್ತಿಲ್ಲ. ಜಿಲ್ಲಾಡಳಿತ ಮದ್ಯದಂಗಡಿಗಳಲ್ಲಿ ಗ್ರಾಹಕರಿಗೆ ಕೊಡುವ ಸೇವೆಯನ್ನು ನಿಲ್ಲಿಸಲಿ, ಆದರೆ ಪಾರ್ಸೆಲ್ ವ್ಯವಸ್ಥೆಯನ್ನಾದರೂ ಮಾಡಬೇಕೆಂದು ಗಡಿಭಾಗದ ಜನರು ಆಗ್ರಹಿಸಿದ್ದಾರೆ.
ಈ ನಡುವೆ ಇನ್ನು ಮದ್ಯದಂಗಡಿಗಳ ಮಾಲೀಕರೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ಈ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಡಿ ಭಾಗದಿಂದ 5 ಕಿ.ಮೀ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡುವುದಕ್ಕೆ ಆದೇಶ ನೀಡಿರುವುದು ಸರಿಯಲ್ಲ. ಲಾಕ್‌ಡೌನ್ ವೇಳೆ ನೆಲಕಚ್ಚಿದ್ದ ಉದ್ಯಮ ಸದ್ಯ ತೆರೆಯುತ್ತಿದೆ. ಇದರ ನಡುವೆ ಈಗ ಜಿಲ್ಲಾಡಳಿತ ಮತ್ತೆ ಬಂದ್ ಮಾಡುವುದಕ್ಕೆ ಆದೇಶ ನೀಡಿದ್ದು, ಮತ್ತೆ ಮುಚ್ಚುವುದರಿಂದ ಕಾರ್ಮಿಕರ ಬದುಕು ಅತಂತ್ರವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದೇಶ ಕುರಿತು ಆಕ್ರೋಶಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಎಡಿಜಿಪಿ ಪ್ರತಾಪ್ ರೆಡ್ಡಿಯವರು, ಪಾಸಿಟಿವಿಟಿ ಪ್ರಮಾಣ ಸಾಮಾನ್ಯ ಮಟ್ಟಕ್ಕೆ ಬರುವವರೆಗೂ ಈ ನಿರ್ಬಂಧಗಳು ಮುಂದುವರೆಯಲಿವೆ. ಮಂಗಳೂರು ಟೌನ್ ಹಾಲ್ ಬಳಿ ಕೋವಿಡ್ ಪರೀಕ್ಷೆ ಹಾಗೂ ಕ್ವಾರಂಟೈನ್'ಗೆ ಜಿಲ್ಲಾಡಳಿತ ಮಂಡಳಿ ವ್ಯವಸ್ಥೆಗಳನ್ನು ಕಲ್ಪಿಸಿದೆ ಎಂದು ಹೇಳಿದ್ದಾರೆ.