ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆಗಳು ಪುನರಾರಂಭ: ಹುಮ್ಮಸ್ಸಿನಿಂದ ಮಕ್ಕಳು ತರಗತಿಗೆ ಹಾಜರು

ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಅ.25ರಿಂದ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ಕಳೆದ 20 ತಿಂಗಳುಗಳಿಂದ ಬಂದ್ ಆಗಿದ್ದ ಈ ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಶುರುವಾಗಿದೆ. ಆದರೆ, ಮಕ್ಕಳಿಗೆ ಹಾಜರಿ ಕಡ್ಡಾಯವಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಅ.25ರಿಂದ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ಕಳೆದ 20 ತಿಂಗಳುಗಳಿಂದ ಬಂದ್ ಆಗಿದ್ದ ಈ ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಶುರುವಾಗಿದೆ. ಆದರೆ, ಮಕ್ಕಳಿಗೆ ಹಾಜರಿ ಕಡ್ಡಾಯವಿಲ್ಲ.

ಮಕ್ಕಳ ಸ್ವಾಗತಕ್ಕೆ ಬಹುತೇಕ ಶಾಲೆ ಆವರಣ, ಕೊಠಡಿಗಳನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು, ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ರಾಜ್ಯದ 44,616 ಸರ್ಕಾರಿ ಪ್ರಾಥಮಿಕ ಮತ್ತು 19645 ಅನುದಾನ ರಹಿತ ಹಾಗೂ ಅನುದಾನಿಕ ಖಾಸಗಿ ಶಾಲೆಗಳಲ್ಲಿ 1 ರಿಂದ 5ನೇ ತರಗತಿಗಳಿಗೆ ಒಟ್ಟು 46 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರವೇಶ ಪಡೆದುಕೊಂಡಿದ್ದಾರೆ. ಆದರೆ, ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವುದು ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಇದರ ನಡುವೆ ಮಕ್ಕಳಿಗೆ ವೈರಲ್, ಡೆಂಘೀ, ಮಲೇರಿಯಾ ಜ್ವರ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ.

ಶಾಲೆಗಳಲ್ಲಿ ಮೊದಲ 5 ದಿನಗಳು ಅರ್ಧ ದಿನವಷ್ಟೇ ಕ್ಲಾಸ್‌ಗಳು ನಡೆಯಲಿವೆ. ಭೌತಿಕ ತರಗತಿಗೆ ಹಾಜರಾಗಲು ಮಕ್ಕಳಿಗೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿರಲಿದೆ. ಈ ವೇಳೆ ಶಿಕ್ಷಣ ಇಲಾಖೆಯ ಮಾರ್ಗಸೂಚಿ ಪಾಲನೆ ಮಾಡುವುದು ಕಡ್ಡಾಯವಾಗಿರಲಿದೆ. ಜೊತೆಗೆ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಎರಡು ಡೋಸ್​ ಲಸಿಕೆ ಪಡೆದಿರಬೇಕು. ಇನ್ನು 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್​ಶೀಲ್ಡ್​ ಬಳಸಬೇಕಿದೆ.

ಇನ್ನುಳಿದ ಎರಡು ದಿನ ಶಾಲೆ ಕೊಠಡಿಗಳ ಕ್ಲಿನಿಂಗ್, ಶೇಕಡಾ 50ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ ನೀಡಲಾಗಿದೆ. ಪಾಸಿಟಿವಿಟಿ ದರ ಶೇಕಡಾ 1ಕ್ಕಿಂತ ಕಡಿಮೆ ಇರುವಲ್ಲಿ ಮಾತ್ರ ಸ್ಕೂಲ್ ಓಪನ್ ಮಾಡಲಾಗುತ್ತಿದೆ.

ರಾಜ್ಯದಲ್ಲಿ 1ರಿಂದ 5ನೇ ತರಗತಿಗಳನ್ನು ಆರಂಭಿಸಲು ತೀರ್ಮಾನಿಸಿರುವ ಸರ್ಕಾರ ಮಾರ್ಗಸೂಚಿಯನ್ನೂ ಪ್ರಕಟಿಸಿದೆ. ಮಾರ್ಗಸೂಚಿಯ ವಿವರ ಇಂತಿದೆ...

ಅಕ್ಟೋಬರ್ 30ರವರೆಗೆ ಅರ್ಧದಿನ ಮಾತ್ರ ತರಗತಿ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ, ಶನಿವಾರ ಬೆಳಗ್ಗೆ 8ರಿಂದ 11.40ರವರೆಗೆ ತರಗತಿ ನಡೆಸಬೇಕು ಎಂದು ಸರ್ಕಾರ ಸೂಚಿಸಿದ್ದು, ನವೆಂಬರ್​ 2ರಿಂದ ಪೂರ್ಣಾವಧಿ ತರಗತಿಗಳು ಅಂದರೆ, ಬೆಳಗ್ಗೆ 10ರಿಂದ ಸಂಜೆ 4.30ರವರೆಗೂ ತರಗತಿಗಳು ನಡೆಯಲಿವೆ.

ಮಕ್ಕಳು ಶಾಲೆಗೆ ಬರಲು ಪೋಷಕರ ಒಪ್ಪಿಗೆ ಕಡ್ಡಾಯ. ಅ.30ರವರೆಗೆ ಮಧ್ಯಾಹ್ನದ ಬಿಸಿಯೂಟ ಇರುವುದಿಲ್ಲ. ನ.2ರಿಂದ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆ ಮಾಡಲಾಗುವುದು. ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳೇ ಊಟ ತರಬೇಕು. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಒಂದು ಕೊಠಡಿಯಲ್ಲಿ 15-20 ಮಕ್ಕಳ ತಂಡ ರಚಿಸಿ ಪಾಠ. ಶಾಲೆ ಗೇಟ್​​ ಬಳಿ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್​ ವ್ಯವಸ್ಥೆ ಕಡ್ಡಾಯ. ಯಾವುದೇ ಮಕ್ಕಳಲ್ಲಿ ಕೊರೊನಾ ಕಂಡುಬಂದರೆ ಶಾಲೆಯನ್ನು ಸ್ಯಾನಿಟೈಸ್​ ಮಾಡಬೇಕು. ಮುಂದಿನ ಆದೇಶದವರೆಗೆ ಎಲ್​ಕೆಜಿ, ಯುಕೆಜಿ ಆರಂಭಿಸುವಂತಿಲ್ಲ. ಶಿಕ್ಷಕರು, ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ. ಶಿಕ್ಷಕರು 2 ಡೋಸ್​ ಲಸಿಕೆ ಪಡೆದಿರುವುದು ಕಡ್ಡಾಯ. 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್​​ಶೀಲ್ಡ್​​​ ಧರಿಸಬೇಕು ಎಂದು ಸರ್ಕಾರ ಆದೇಶಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com