ಬೆಂಗಳೂರಿನ ಇಬ್ಬರಲ್ಲಿ ಓಮಿಕ್ರಾನ್ ಪತ್ತೆ: ಸೋಂಕಿತರ ಸಂಪರ್ಕಿತರ ಪತ್ತೆ, ಪರೀಕ್ಷೆಗೆ ಅಧಿಕಾರಿಗಳು ಮುಂದು!
ಇಬ್ಬರಿಗೆ ಓಮಿಕ್ರಾನ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ಕೇವಲ ಜನರಿಗಷ್ಟೇ ಅಲ್ಲದೆ, ವೈದ್ಯಕೀಯ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರಲ್ಲೂ ಆತಂಕ ಹೆಚ್ಚಿದೆ.
Published: 03rd December 2021 01:00 PM | Last Updated: 03rd December 2021 02:54 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಇಬ್ಬರಿಗೆ ಓಮಿಕ್ರಾನ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ಕೇವಲ ಜನರಿಗಷ್ಟೇ ಅಲ್ಲದೆ, ವೈದ್ಯಕೀಯ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರಲ್ಲೂ ಆತಂಕ ಹೆಚ್ಚಿದೆ.
ಬಿಬಿಎಂಪಿ ಅಧಿಕಾರಿಗಳು ಮಾತನಾಡಿ, ಓಮಿಕ್ರಾನ್ ಸೋಂಕು ಪತ್ತೆಯಾದ 46 ವರ್ಷದ ವೈದ್ಯನ ಜೊತೆಗೆ ಸಂಪರ್ಕದಲ್ಲಿದ್ದ ಐವರಲ್ಲೂ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಇದೀಗ ಐವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ವರದಿಗಳಿಗಾಗಿ ಕಾಯಲಾಗುತ್ತಿದೆ. ಪ್ರಯಾಣದ ಇತಿಹಾಸವನ್ನು ಹೊಂದಿರದ ಸೋಂಕು ಪೀಡಿತ ವೈದ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಿದ್ದ ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಸಮ್ಮೇಳನದಲ್ಲಿ ಸುಮಾರು 80 ಪ್ರತಿನಿಧಿಗಳು ಭಾಗಿಯಾಗಿದ್ದರು. ಕೆಲವರು ಸೋಂಕು ಪೀಡಿತರಾಗಿದ್ದು, ಸೋಂಕನ್ನು ಹರಡಿರಬಹುದು. ಈ ವೈದ್ಯ ಕೂಡ ಅವರಲ್ಲಿ ಒಬ್ಬರಾಗಿರಬಹುದು. ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದ ಪ್ರತೀಯೊಬ್ಬರೊಂದಿಗೂ ಮಾತುಕತೆ ನಡೆಸಲು ಪ್ರಯತ್ನಿಸಲಾಗುತ್ತಿದ್ದು, ಪ್ರತೀಯೊಬ್ಬರನ್ನೂ ಪರೀಕ್ಷೆಗೊಳಪಡಿಸಲಾಗಿದೆ. ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದ ಪ್ರತೀಯೊಬ್ಬರಲ್ಲೂ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಎಲ್ಲರನ್ನೂ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ವೈದ್ಯನಲ್ಲಿ ನವೆಂಬರ್ 22 ರಂದು ಸೋಂಕು ದೃಢಪಟ್ಟಿತ್ತು. ನಂತರ ವೈದ್ಯರನಲ್ಲಿ ಓಮಿಕ್ರಾನ್ ಸೋಂಕಿನ ಲಕ್ಷಣಗಳು ಕಂಡು ಬಂದಿತ್ತು. ಬಳಿಕ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮೂಲಗಳಿಂದು ತಿಳಿದುಬಂದಿದೆ.
ಇದನ್ನೂ ಓದಿ: ಓಮಿಕ್ರಾನ್ ಈಗಾಗಲೇ ಕರ್ನಾಟಕದಲ್ಲಿ ಇದ್ದಿರಬಹುದು, ಆದರೆ ಈಗ ಪತ್ತೆಯಾಗಿದೆ: ವೈರಾಣು ತಜ್ಞರು
ಸೋಂಕಿತ ವೈದ್ಯರೊಂದಿಗೆ 13 ಪ್ರಾಥಮಿಕ ಹಾಗೂ 204 ಮಂದಿ ದ್ವಿತೀಯ ಸಂಪರ್ಕದಲ್ಲಿದ್ದರು. ಮೊದಲು ಸೋಂಕು ಪತ್ತೆಯಾದಾಗ ವೈದ್ಯ ಮನೆಯಲ್ಲಿಯೇ ಕ್ವಾರಂಟೈನ್ ಗೊಳಗಾಗಿದ್ದರು. ಆದರೆ, ಎರಡನೇ ಬಾರಿ ಪರೀಕ್ಷೆ ಬಳಿಕ ಅವರನ್ನು ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಎಂದು ಅಧಿಕಾರಿಗಳಉ ಮಾಹಿತಿ ನೀಡಿದ್ದಾರೆ.
ವೈದ್ಯನಲ್ಲಿ ಅಲ್ಪ ಪ್ರಮಾಣದ ಸೋಂಕು ಪತ್ತೆಯಾಗಿದ್ದು, ಸೋಂಗು ತಗುಲಿ 10-12 ದಿನಗಳು ಕಳೆದ ಹಿನ್ನೆಲೆಯಲ್ಲಿ ಆರೋಗ್ಯ ಸ್ಥಿರವಾಗಿದೆ. ಸೋಂಕಿತರ ಪತ್ನಿ ಹಾಗೂ ಮಕ್ಕಳಿಗೂ ಸೋಂಕು ತಗುಲಿರುವ ಶಂಕೆಗಳು ವ್ಯಕ್ತವಾಗಿವೆ. ಈಗಾಗಲೇ ಇವರೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರಲ್ಲೂ ಸೋಂಕು ದೃಢಪಟ್ಟಿದ್ದು, ಇಬ್ಬರಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಸೋಂಕು ಪತ್ತೆಯಾಗಿರುವ ಎಲ್ಲರೂ ಎರಡು ಡೋಸ್ ಲಸಿಕೆ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲರಲ್ಲೂ ಸೌಮ್ಯವಾದ ಲಕ್ಷಣಗಳು ಕಂಡು ಬಂದಿದೆ. ಇವರ ಜೊತೆಗಿದ್ದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಮಾಡಲಾಗುತ್ತಿದ್ದು, 160 ಮಂದಿ ಆಸ್ಪತ್ರೆಯ ಸಿಬ್ಬಂದಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.