ಹೊರರಾಜ್ಯದಿಂದ ಬಂದವರೊಂದಿಗೆ ಎಚ್ಚರಿಕೆಯಿಂದಿರಿ: ಜನತೆಗೆ ಬಿಬಿಎಂಪಿ

ರಾಜ್ಯದಲ್ಲಿ ಲಾಕ್ಡೌನ್ ನಿಯಮ ಸಡಿಲಗೊಂಡಿದ್ದು, ಹೊರ ರಾಜ್ಯದಿಂದ ನಗರಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು, ಹೊರ ರಾಜ್ಯದಿಂದ ಬಂದವರೊಂದಿಗೆ ಎಚ್ಚರಿಕೆಯಿಂದಿರುವಂತೆ ಜನತೆಗೆ ಬಿಬಿಎಂಪಿ ಹೇಳಿದೆ. 
ಗೌರವ್ ಗುಪ್ತಾ
ಗೌರವ್ ಗುಪ್ತಾ

ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ನಿಯಮ ಸಡಿಲಗೊಂಡಿದ್ದು, ಹೊರ ರಾಜ್ಯದಿಂದ ನಗರಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು, ಹೊರ ರಾಜ್ಯದಿಂದ ಬಂದವರೊಂದಿಗೆ ಎಚ್ಚರಿಕೆಯಿಂದಿರುವಂತೆ ಜನತೆಗೆ ಬಿಬಿಎಂಪಿ ಹೇಳಿದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಸರ್ಕಾರದ ನಿರ್ದೇಶನದಂತೆ ಹೆಚ್ಚು ಸೋಂಕಿರುವ ರಾಜ್ಯಗಳು ಅಂದರೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದವರು ಆರ್'ಟಿ-ಪಿಸಿಆರ್ ನೆಗೆಟಿವ್ ವರದಿ ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಯಾವುದೇ ವ್ಯಕ್ತಿ ಈ ರಾಜ್ಯದಿಂದ ಬಂದು ಅಧಿಕಾರಿಗಳ ಗಮನಕ್ಕೆ ತರದಿದ್ದಲ್ಲಿ ಅಂತಹವರ ಕುರಿತು ಜನರೇ ಬಿಬಿಎಂಪಿಗೆ ಮಾಹಿತಿ ನೀಡಬೇಕು. ಕೂಡಲೇ ಮೊಬೈಲ್ ಟೆಸ್ಟಿಂಗ್ ತಂಡವನ್ನು ಸ್ಥಳಕ್ಕೆ ಕಳುಹಿಸಿ ವ್ಯಕ್ತಿಯನ್ನು ಪರೀಕ್ಷೆಗೊಳಪಡಿಸುವ ಕೆಲಸವನ್ನು ಬಿಬಿಎಂಪಿ ಮಾಡಲಿದೆ. ಸೋಂಕು ನಿಯಂತ್ರಿಸಲು ಜನರೂ ಕೂಡ ಬಿಬಿಎಂಪಿಯೊಂದಿಗೆ ಕೈಜೋಡಿಸಬೇಕೆಂದು ಹೇಳಿದ್ದಾರೆ. 

ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಬಂದ ಬಳಿಕ ಕೆಲವರು 2-3 ತಿಂಗಳಾದರೂ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಭಯಪಡುವ ಅಗತ್ಯವಿಲ್ಲ. ಏಕೆಂದರೆ ಒಬ್ಬ ವ್ಯಕ್ತಿಯಲ್ಲಿ ವೈರಸ್ ದೀರ್ಘಕಾಲದವರೆಗೂ ಇರುವುದಿಲ್ಲ ಎಂದು ತಿಳಿಸಿದ್ದಾರೆ. 

ವಾಣಿಜ್ಯ ಕಟ್ಟಡಗಳ ತೆರೆಯಲು ಅನುಮತಿ ನೀಡುವಂತೆ ಸಾಕಷ್ಟು ಮನವಿಗಳು ಬರುತ್ತಿವೆ. ಆದರೆ, ರಾಜ್ಯದಲ್ಲಿ ವೈರಸ್ ಇನ್ನೂ ಸಕ್ರಿಯವಾಗಿದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಇರಬೇಕಿದೆ. ಮಾರುಕಟ್ಟೆ ತೆರೆಯುವ ಕುರಿತು ಮಾತುಕತೆಗಳು ನಡೆಯುತ್ತಿವೆ. ಜನರು ಕಾಯಬೇಕಿದೆ ಎಂದಿದ್ದಾರೆ. 

ಹೂವು, ಹಣ್ಣು ಹಾಗೂ ಚಿಕ್ಕಪೇಟೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳಿಗೆ ಅನುಮತಿ ನೀಡಲಾಗಿದೆ. ನಿರ್ಬಂಧ ಹಾಗೂ ನಿಯಮಗಳೊಂದಿಗೆ ಮಾಲ್ ಗಳ ತೆರೆಯಲು ಅನುಮತಿ ನೀಡಲಾಗುತ್ತದೆ. ಆದರೆ ಚಿತ್ರಮಂದಿರ ತೆರೆಯಲು ಅನುಮತಿ ನೀಡಲು ಸಾಧ್ಯವಿಲ್ಲ. ಏಕೆಂದರೆ ಈ ಪ್ರದೇಶದಲ್ಲಿ ಅತೀ ಹೆಚ್ಚು ಜನರು ಸೇರುವುದರಿಂದ ಅಪಾಯ ಎದುರಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. 

ಎಲ್ಲೆಡೆ ಡೆಲ್ಟಾ ವೈರಸ್ ಅಪಾಯಕಾರಿ ವೈರಸ್ ಆಗಿ ಪರಿವರ್ತನೆಗೊಂಡಿದೆ. ನಮ್ಮಲ್ಲಿ ಮಾತ್ರವಲ್ಲ ವಿಶ್ವದ ಎಲ್ಲಾ ಕಡೆ ಡೆಲ್ಟಾ ಇದ್ದು, ಭಾರತದಲ್ಲಿ ಏಪ್ರಿಲ್ ನಲ್ಲೇ ಈ ವೈರಸನ್ನು ಪತ್ತೆ ಮಾಡಲಾಗಿತ್ತು. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಪ್ರಕರಣಗಳು ಸಹಜವಾಗಿದ್ದು, ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್ ನಲ್ಲಿ ಪತ್ತೆ ಹಚ್ಚಲಾಗಿದೆ. ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಈ ವಿಚಾರದಲ್ಲಿ ಯಾರೂ ಕೂಡ ನಿರ್ಲಕ್ಷ್ಯ ವಹಿಸಬಾರದು ಎಂದು ಸಲಹೆ ನೀಡಿದ್ದಾರೆ. 

ಕೊರೋನಾ 2ನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರ ವೀಕೆಂಡ್ ಮತ್ತು ನೈಟ್ ಕರ್ಫ್ಯೂವಿನಲ್ಲಿ ಸಡಿಲಿಕೆ ಮಾಡಬೇಕೆಂಬುದು ನಮ್ಮ ಅಭಿಪ್ರಾಯ. ಸರ್ಕಾರಕ್ಕೆ ಸಲಹೆ ಕೊಡುತ್ತೇವೆ. ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಹಂತ ಹಂತವಾಗಿ ಅನ್'ಲಾಕ್'ಗೆ ಮುಂದಾಗಿರುವ ಸರ್ಕಾರ ಸೋಮವಾರ ಮತ್ತಷ್ಟು ಕ್ಷೇತ್ರಗಳಿಗೆ ವಿನಾಯಿತಿ ನೀಡಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com