ರಾಜ್ಯದಲ್ಲಿ ಇಳಿದ ಕೊರೋನಾ: 3 ತಿಂಗಳ ಬಳಿಕ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆ!

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಇಳಿಕೆಯಾಗುತ್ತಿದ್ದು, ಕೊರೋನಾ 2ನೇ ಅಲೆ ಅಬ್ಬರ ಪ್ರಾರಂಭವಾದಗೊಂಡ ಬಳಿಕ ಅತ್ಯಂತ ಕಡಿಮೆ ಸಾವು ಬುಧವಾರ ವರದಿಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಇಳಿಕೆಯಾಗುತ್ತಿದ್ದು, ಕೊರೋನಾ 2ನೇ ಅಲೆ ಅಬ್ಬರ ಪ್ರಾರಂಭವಾದಗೊಂಡ ಬಳಿಕ ಅತ್ಯಂತ ಕಡಿಮೆ ಸಾವು ಬುಧವಾರ ವರದಿಯಾಗಿದೆ. 

ಬೆಂಗಳೂರಿನಲ್ಲಿ ಮೂವರು ಸೇರಿದಂತೆ ರಾಜ್ಯದಲ್ಲಿ ನಿನ್ನೆ ಕೊರೋನಾ ಸೋಂಕಿನಿಂದ 19 ಮಂದಿ ಸಾವನ್ನಪ್ಪಿದ್ದಾರೆ. ಇದರ ಜೊತೆಗೆ 1,531 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಮೂರು ತಿಂಗಳ ಬಳಿಕ ರಾಜ್ಯದಲ್ಲಿ 20ಕ್ಕಿಂತಲೂ ಕಡಿಮೆ ಸಾವು ವರದಿಯಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ನಿನ್ನೆ ಒಟ್ಟು 1,430 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಬಹು ದಿನಗಳ ಬಳಿಕ ದೈನಂದಿನ ಸೋಂಕಿತರ ಸಂಖ್ಯೆಗಿಂತಲೂ ಗುಣಮುಖರ ಸಂಖ್ಯೆ ಕಡಿಮೆ ದಾಖಲಾಗಿದೆ. ಏ.4ರಂದು 15 ಮಂದಿ ಮೃತರಾಗಿದ್ದು, ಆ ಬಳಿಕದ ಅತ್ಯಂತ ಕಡಿಮೆ ಸಂಖ್ಯೆಯ ಕೋವಿಡ್ ಸಾವು ನಿನ್ನೆ ದಾಖಲಾಗಿದೆ. ಇದು 115 ದಿನದಲ್ಲಿ ವರದಿಯಾದ ಕನಿಷ್ಟ ಸಾವಿನ ಸಂಖ್ಯೆಯಾಗಿದೆ. 

ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.35ರಿಂದ ಶೇ.39ರ ತನಕ ಇದ್ದದ್ದು, ಇತ್ತೀಚಿನ ದಿನಗಳಲ್ಲಿ ಶೇ.1.25ರ ಆಸುಪಾಸಿನಲ್ಲಿ ವರದಿಯಾಗುತ್ತಿದ್ದರೂ ಇದೇ ಪ್ರಮಾಣದಲ್ಲಿ ಮರಣ ದರ ಇಳಿಯುವ ಬದಲು ಏರಿಕೆಯಾಗಿತ್ತು. ಬುಧವಾರ ಮರಣ ದರ ಕೂಡ ಶೇ.1.24ಕ್ಕೆ ಕುಸಿದಿದೆ. ಇದೇ ವೇಳೆ 71 ದಿನಗಳ ಬಳಿಕ ಗುಣಮುಖರ ಸಂಖ್ಯೆ ಕಡಿಮೆಯಾಗಿದೆ. 

ಈ ನಡುವೆ ಉತ್ತಮ ಬೆಳವಣಿಗೆ ಎಂಬಂತೆ ರಾಜ್ಯದ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೀದರ್, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ತುಮಕೂರು, ಉತ್ತರ ಕನ್ನಡ, ವಿಜಯಪುರ ಹಾಗೂ ಯಾದಗಿರಿಯಲ್ಲಿ ನಿನ್ನೆ ಶೂನ್ಯ ಸಾವು ವರದಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com