ನಟ ಸಂಚಾರಿ ವಿಜಯ್ ನಿಧನ: ಕನ್ನಡದಲ್ಲೇ ಟ್ವೀಟ್ ಮಾಡಿ ಕಂಬನಿ ಮಿಡಿದ ಅಮೆರಿಕ ರಾಯಭಾರ ಕಚೇರಿ, ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ

ಬೈಕ್ ಅಪಘಾತದಲ್ಲಿ ಮೃತಪಟ್ಟ ಖ್ಯಾತ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಅಮೆರಿಕ ರಾಯಭಾರ ಕಚೇರಿ ಕಂಬನಿ ಮಿಡಿದಿದೆ.
ಸಂಚಾರಿ ವಿಜಯ್
ಸಂಚಾರಿ ವಿಜಯ್

ಬೆಂಗಳೂರು: ಬೈಕ್ ಅಪಘಾತದಲ್ಲಿ ಮೃತಪಟ್ಟ ಖ್ಯಾತ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಅಮೆರಿಕ ರಾಯಭಾರ ಕಚೇರಿ ಕಂಬನಿ ಮಿಡಿದಿದೆ.

ಕನ್ನಡದ ಉದಯೋನ್ಮುಖ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಅಕಾಲಿಕ ನಿಧನಕ್ಕೆ ರಾಜಕೀಯ ನಾಯಕರು ಸೇರಿದಂತೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಜೊತೆಗೆ ಅಮೆರಿಕದ ರಾಯಭಾರ ಕಚೇರಿಯಿಂದಲೂ ಸಂತಾಪ ಸೂಚಿಸಲಾಗಿದೆ. ಅದೂ ಕೂಡ  ಕನ್ನಡಲ್ಲಿಯೇ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿರುವುದು ವಿಶೇಷವಾಗಿದೆ. 

ಚೆನ್ನೈನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್ ಖಾತೆ, ಯುಎಸ್ ಅಂಡ್ ಚೆನ್ನೈ ಖಾತೆಯಲ್ಲಿ ಈ ಟ್ವೀಟ್ ಮಾಡಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ನಮ್ಮ ಸಂತಾಪಗಳು. 2018ರಲ್ಲಿ ಚೆನ್ನೈನ ಅಮೆರಿಕ  ದೂತಾವಾಸದಲ್ಲಿ #Pride ತಿಂಗಳ ಆಚರಣೆಯ ಅಂಗವಾಗಿ LGBTQi+ (ಲೈಂಗಿಕ ಅಲ್ಪಸಂಖ್ಯಾತರು) ಸಮುದಾಯದ ಸಂಘರ್ಷವನ್ನು ಬಿಂಬಿಸುವ ಪ್ರಶಸ್ತಿ ವಿಜೇತ ಚಿತ್ರ 'ನಾನು ಅವನಲ್ಲ…ಅವಳು' ಪ್ರದರ್ಶನ ಸಂವಾದದಲ್ಲಿ ಸಂಚಾರಿ ವಿಜಯ್‌ ಭಾಗಿಯಾಗಿದ್ದರು ಎಂದು  ಟ್ವೀಟ್ ಮಾಡಿದೆ.

ಇನ್ನು ಈ ಟ್ವೀಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ನೂರಾರು ಮಂದಿ ರಿಟ್ವೀಟ್ ಮಾಡಿದ್ದಾರೆ. ಕೆಲವರು ನಮ್ಮ ದೇಶದವರೇ.. ಹೀಗೆ ಸಾಮಾನ್ಯ ಜನರಿಗೆ ಅರ್ಥ ಆಗುವ ರೀತಿಯಲ್ಲಿ ಹಾಕಲ್ಲ. ಆದರೆ ನೀವು ಕನ್ನಡದ ನಟನಿಗೆ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಸಂತಾಪ  ಸೂಚಿಸಿರುವುದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ
ಸ್ವಗ್ರಾಮ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ವಿಜಯ್ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪೊಲೀಸ್ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಸೂಚಿಸಿದ್ದಾರೆ. ರಾಜ್ಯ ಸರ್ಕಾರದ  ಸೂಚನೆಯಂತೆ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com