ಕೆಲಸವಿಲ್ಲ, ಹಣವಿಲ್ಲ, ಹಸಿವಿನಲ್ಲೇ ಮಡಿಕೇರಿ ತಲುಪಲು 60 ಕಿ.ಮೀ ನಡೆದ ವಲಸೆ ಕಾರ್ಮಿಕ!
ಕೊರೋನಾ ಕರ್ಫ್ಯೂ ರಾಜ್ಯದಲ್ಲಿ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕೆಲಸ, ಹಣವಿಲ್ಲದೆ ಕಂಗಾಲಾಗಿ ಮಂಗಳೂರಿನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕನೊಬ್ಬ ಊಟವಿಲ್ಲದೆ ಹಸಿವಿನಲ್ಲೇ ಮಡಿಕೇರಿ ತಲುಪಲು 60 ಕಿ.ಮೀ ನಡೆದಿದ್ದಾನೆ.
Published: 11th May 2021 12:14 PM | Last Updated: 11th May 2021 12:14 PM | A+A A-

ಸಂಗ್ರಹ ಚಿತ್ರ
ಮಂಗಳೂರು: ಕೊರೋನಾ ಕರ್ಫ್ಯೂ ರಾಜ್ಯದಲ್ಲಿ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕೆಲಸ, ಹಣವಿಲ್ಲದೆ ಕಂಗಾಲಾಗಿ ಮಂಗಳೂರಿನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕನೊಬ್ಬ ಊಟವಿಲ್ಲದೆ ಹಸಿವಿನಲ್ಲೇ ಮಡಿಕೇರಿ ತಲುಪಲು 60 ಕಿ.ಮೀ ನಡೆದಿದ್ದಾನೆ.
ರಾಜ್ಯ ಸರ್ಕಾರ ಕರ್ಫ್ಯೂ ಜಾರಿಗೆ ತಂದ ಬಳಿಕ ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಡಿಕೇರಿ ನಿವಾಸಿ ಶಿವ (50) ಎಂಬ ವ್ಯಕ್ತಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ. ಕಳೆದೆರಡು ದಿನಗಳಿಂದ ಹಸಿವಿನಿಂದ ಬಳಲಿದ್ದಾನೆ.
ಮಂಗಳೂರಿನಿಂದ ಮಡಿಕೇರಿಗೆ 137 ಕಿ.ಮೀ ಗಳಿದ್ದು, ಹಣ, ಕೆಲಸವಿಲ್ಲದ ಕಾರಣ ನಡೆದುಕೊಂಡೇ ಊರು ತಲುಪಲು ನಿರ್ಧರಿಸಿದ್ದಾನೆ.
ಹೀಗೆ 60 ಕಿಲೋಮೀಟನ್ ನಡೆದ ಶಿವ ಅವರಿಗೆ ಪುತ್ತೂರಿನಲ್ಲಿ ದಾರಿ ಮಧ್ಯೆ ಪೊಲೀಸರು ಎದುರಾಗಿದ್ದಾರೆ. ಈ ವೇಳೆ ವ್ಯಕ್ತಿಯ ಕಷ್ಟವನ್ನು ಅರಿತ ಪೊಲೀಸರು ಸರಕು ವಾಹನವೊಂದರಲ್ಲಿ ಆತ ಊರು ತಲುಪಲು ಸಹಾಯ ಮಾಡಿದ್ದಾರೆ.
ಮೇ.1 ರಂದು ಘಟನೆ ನಡೆದಿದ್ದು, ದಕ್ಷಿಣ ಕನ್ನಡದ ಪೊಲೀಸ್ ಅಧಿಕಾರಿ ರಿಶಿಕೇಶ್ ಸೋನಾವಾನೆಯವರು ಸೋಮವಾರ ಘಟನೆಯನ್ನು ವಿವರಿಸಿದ್ದಾರೆ.
ಪುತ್ತೂರು ಗ್ರಾಮೀಣ ಪೊಲೀಸ್ ಠಾಣೆಗೆ ಮುಖ್ಯ ಪೇದೆ ದಯಾನಂದ್ ಹಾಗೂ ಗೃಹ ರಕ್ಷದ ದಳದ ಸಿಬ್ಬಂದಿ ಕಿರಣ್ ಎಂಬುವವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸಂತ್ಯಾರು ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಸ್ಥಳದಲ್ಲಿ ಕೆಲ ಸ್ಥಳೀಯ ಪತ್ರಕರ್ತರೂ ಇದ್ದರು.
ವ್ಯಕ್ತಿಯೊಬ್ಬ ಮರದಿಂದ ಕೆಳಗೆ ಬಿದ್ದಿದ್ದ ಮಾವಿನ ಹಣ್ಣು ತಿನ್ನುತ್ತಿರುವುದು ಇವರ ಕಣ್ಣಿಗೆ ಬಿದ್ದಿದೆ. ಕೂಡಲೇ ದಯಾನಂದ್ ಅವರು ಕಾರ್ಮಿಕ ಶಿವ ಅವರ ಬಳಿ ಹೋಗಿ ವಿಚಾರಿಸಿದ್ದಾರೆ. ಈ ವೇಳೆ ವ್ಯಕ್ತಿ ಕಳೆದ ಎರಡು ದಿನಗಳಿಂದ ಊಟ ಮಾಡದಿರುವುದನ್ನು ತಿಳಿಸಿ, ಮಡಿಕೇರಿಯ ರಾಣಿಪೇಟೆಗೆ ನಡೆದು ಹೋಗುತ್ತಿದ್ದೇನೆಂದು ಹೇಳಿದ್ದಾನೆ.
ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಕರ್ಫ್ಯೂ ಜಾರಿಯಾಗುವುದಕ್ಕೂ 5 ದಿನಗಳ ಮುನ್ನ ಮಂಗಳೂರಿಗೆ ಹೋಗಿದ್ದಾರೆ. ಆದರೆ, ಕೊರೋನಾ ನಿರ್ಬಂಧಗಳು ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಅವರಿಗೆ ಕೆಲಸ ಸಿಕ್ಕಿಲ್ಲ. ಎರಡು ದಿನಗಳಿಂದ ಊಟ ಮಾಡಿಲ್ಲ. ಹೀಗಾಗೀ ಮಾವಿನ ಹಣ್ಣನ್ನು ತಿನ್ನುತ್ತಿರುವುದಾಗಿ ಹೇಳಿದ್ದರು. ಆ ಹಣ್ಣನ್ನೂ ಪಕ್ಷಿಗಳು ಅರ್ಧ ತಿಂದು ಬಿಟ್ಟಿದ್ದನ್ನು ತಿನ್ನುತ್ತಿದ್ದರು. ಹೀಗಾಗಿ ವ್ಯಕ್ತಿಗೆ ಸರಕು ವಾಹನವೊಂದರ ಚಾಲಕನ ಬಳಿ ಮನವಿ ಮಾಡಿಕೊಂಡು ಮಡಿಕೇರಿ ತಲುಪಿಸುವ ವ್ಯವಸ್ಥೆ ಮಾಡಿದೆವದು ಎಂದು ಪೇದೆ ದಯಾನಂದ್ ಅವರು ಹೇಳಿದ್ದಾರೆ.