ದೆಹಲಿಯಿಂದ ವಾಪಸ್ಸಾದ ಸಿಎಂ ಬೊಮ್ಮಾಯಿ: ರಾಜ್ಯದ ಹಲವು ಯೋಜನೆಗಳಿಗೆ ಕೇಂದ್ರ ಒಪ್ಪಿಗೆ

ಎರಡು ದಿನಗಳ ದೆಹಲಿ ಪ್ರವಾಸದಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಕೇಂದ್ರದಿಂದ ಅನುಮತಿ ಪಡೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಗರಕ್ಕೆ ಬುಧವಾರ ವಾಪಸ್ಸಾಗಿದ್ದಾರೆ. 
ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆಗೆ ಸಿಎಂ ಬೊಮ್ಮಾಯಿ
ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆಗೆ ಸಿಎಂ ಬೊಮ್ಮಾಯಿ

ಬೆಂಗಳೂರು: ಎರಡು ದಿನಗಳ ದೆಹಲಿ ಪ್ರವಾಸದಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಕೇಂದ್ರದಿಂದ ಅನುಮತಿ ಪಡೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಗರಕ್ಕೆ ಬುಧವಾರ ವಾಪಸ್ಸಾಗಿದ್ದಾರೆ. 

ಮುಖ್ಯಮಂತ್ರಿಯಾದ ಬಳಿಕ ಬೊಮ್ಮಾಯಿಯವರು ದೆಹಲಿಗೆ ಈ ವರೆಗೂ ಮೂರು ಬಾರಿ ಭೇಟಿ ನೀಡಿದ್ದು, ಹಿಂದಿನ ಎರಡು ಭೇಟಿ ಸಂಪುಟ ಪುನಾರಚನೆ ಹಾಗೂ ಖಾತೆ ವಿಚಾರಗಳಿಗೆ ಸಂಬಂಧಿಸಿದ್ದಾಗವು. ಇತ್ತೀಚೆಗಷ್ಟೇ ಮೂರು ಪಾಲಿಕೆಗಳ ಚುನಾವಣೆ ನಡೆದಿದ್ದು, ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆಯೇ ಬೊಮ್ಮಾಯಿಯವರು ದೆಹಲಿಗೆ ಭೇಟಿ ನೀಡಿದ್ದು, ಕುತೂಹಲವನ್ನು ಮೂಡಿಸಿದ್ದವು. 

ಆದರೆ, ಅತ್ಯಂತ ನಿರಾಳದಿಂದಿದ್ದ ಬೊಮ್ಮಾಯಿಯವರು, ರಾಜ್ಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಕೇಂದ್ರದಿಂದ ಅನುಮೋದನೆ ಪಡೆದುಕೊಂಡಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗುವುದಕ್ಕೂ ಮುನ್ನ ಬೊಮ್ಮಾಯಿಯವರು ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಆದರೆ, ಖಾಲಿ ಉಳಿದಿರುವ ನಾಲ್ಕು ಸಚಿವ ಸ್ಥಾನಕ್ಕೆ ಯಾರನ್ನು ನೇಮಕ ಮಾಡುತ್ತಾರೆಂಬ ಕುತೂಹಲಗಳಿಗೆ ಮಾತ್ರ ಯಾವುದೇ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. 

ಮೂಲಗಳ ಪ್ರಕಾರ ಕೇಂದ್ರೀಯ ನಾಯಕರೂ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ನಡುವೆ ಕೆಲ ನಿಗಮ ಮಂಡಳಿ ನೇಮಕಗಳ ಹೊರತುಪಡಿಸಿ ಸಂಪುಟ ವಿಸ್ತರಣೆ ವಿಚಾರ ಕುರಿತು ಯಾವುದೇ ಮಾತುಕತೆಗಳೂ ನಡೆದಿಲ್ಲ ಎಂದು ತಿಳಿದುಬಂದಿದೆ. 

ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿಯವರು, ಬೆಂಗಳೂರು ನಗರದ ಸುತ್ತಲಿನ ಸಂಚಾರವನ್ನು ಸುಗಮಗೊಳಿಸುವ ದಾಬಸ್ ಪೇಟೆ-ಹೊಸೂರು ರಸ್ತೆ ಉಪನಗರ ವರ್ತುಲ ರಸ್ತೆ ನಿರ್ಮಾಣದ ಬಗ್ಗೆ ಚರ್ಚೆ ಮಾಡಲಾಗಿದ್ದು, ಫಲಪ್ರದವಾಗಿದೆ. ಯೋಜನೆ ಅಡೆತಡೆ ನಿವಾರಣೆಯಾಗಿದೆ. ರಾಜ್ಯದ 4 ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಮನವಿ ಸಲ್ಲಿಸಲಾಗಿದೆ. ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ವಿಸ್ತರಣೆ ಹಾಗೂ ಮಳೆ ಮತ್ತು ಭೂಕುಸಿತದಿಂದ ರಾಜ್ಯದಲ್ಲಿ ವಿವಿಧ ಘಾಟ್ ಗಳ ರಸ್ತೆ ಹಾಳಾಗಿದ್ದು, ಇವುಗಳ ಅಭಿವೃದ್ಧಿಗೆ ರೂ.184 ಕೋಟಿ ಅನುದಾನ ನೀಡಲು ಗಡ್ಕರಿ ಸಮ್ಮತಿ ಸೂಚಿಸಿದ್ದಾರೆಂದು ಹೇಳಿದರು. 

ಇದೇ ವೇಳೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ, ಆಡಳಿತಾತ್ಮಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು. 

ಬಳಿಕ ಕೇಂದ್ರ ಕೌಶಲ್ಯ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಲಾಯಿತು. ಈ ವೇಳೆ ಬೆಂಗಳೂರು-ಕೋಲಾರ ನಡುವೆ 400 ಎಕರೆ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ ಹಾರ್ಡ್ ವೇರ್ ಪಾರ್ಕ್ ನಿರ್ಮಾಣ ಹಾಗೂ ರಾಜ್ಯದಲ್ಲಿ ಆಪ್ಟಿಕಲ್ ಫೈಬರ್ ಇಂಟರ್ನೆಟ್ ಅಳವಡಿಕೆ ಕುರಿತು ಚರ್ಚೆ ನಡೆಸಲಾಯಿತು. ನೆರವು ನೀಡುವುದಾಗಿ ರಾಜೀವ್ ತಿಳಿಸಿದ್ದಾರೆಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com