ಭಾರತ್ ಬಂದ್: ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ, ಮೆಜೆಸ್ಟಿಕ್​​ನಲ್ಲಿ ಬಸ್​​ಗೆ ಅಡ್ಡ ಮಲಗಿ ಕರವೇ ಆಕ್ರೋಶ

ಕೇಂದ್ರದ ನೂತನ ಕೃಷಿ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಂಯುಕ್ತ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತುಮಕೂರಿನಲ್ಲಿ ಭಾರತ್ ಬಂದ್
ತುಮಕೂರಿನಲ್ಲಿ ಭಾರತ್ ಬಂದ್

ಬೆಂಗಳೂರು: ಕೇಂದ್ರದ ನೂತನ ಕೃಷಿ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಂಯುಕ್ತ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವು ಜಿಲ್ಲೆಗಳಲ್ಲಿ ಬಂದ್ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮತ್ತೆ ಕೆಲವು ಜಿಲ್ಲೆಗಳಲ್ಲಿ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಜಿಲ್ಲೆಗಳಲ್ಲಿ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಹೆದ್ದಾರಿ ತಡೆಗೆ ಮುಂದಾದ 20ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಾದ್ಯಂತ ಬಂದ್‌ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರ ವಹಿವಾಟು ಎಂದಿನಂತೆ ಸಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸೇರಿದಂತೆ ವಾಹನಗಳ ಸಂಚಾರ ಎಂದಿನಂತೆ ಸಾಗಿದೆ. ಚಿತ್ರದುರ್ಗ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಜನಜೀವನ ಸಾಮಾನ್ಯವಾಗಿತ್ತು ಎಂದು ನಮ್ಮ ಪ್ರತಿನಿಧಿ ವರದಿ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆಗಳಲ್ಲಿ ವಾಣಿಜ್ಯ ವ್ಯವಹಾರಗಳು ಸಾಮಾನ್ಯವಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬಂದ್ ಯಾವುದೇ ಪರಿಣಾಮ ಬೀರಿಲ್ಲ. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಸಾಗಿದ್ದು, ಸಾರ್ವಜನಿಕರು ತಮ್ಮ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅಂಗಡಿ-ಮುಂಗಟ್ಟು, ಮಾರುಕಟ್ಟೆ, ಹೊಟೇಲ್ ಸೇರಿದಂತೆ ವ್ಯಾಪಾರ ವಹಿವಾಟು ಚಟುವಟಿಕೆ ಎಂದಿನಂತೆ ಸಾಗಿದೆ ಎಂದು ನಮ್ಮ ಪ್ರತಿನಿಧಿ ವರದಿ ಮಾಡಿದ್ದಾರೆ.

ಮೈಸೂರು ನಗರದಲ್ಲೂ ಬಂದ್ ಜನಜೀವನದ ಮೇಲೆ ಯಾವುದೇ ಪರಿಣಾಮ ಉಂಟುಮಾಡಿಲ್ಲ. ನಗರದಲ್ಲಿ ಸಾರಿಗೆ ಸಂಚಾರ, ಆಟೋ, ಟ್ಯಾಕ್ಸಿ, ವಾಹನಗಳ ಸಂಚಾರ ಮಾಮೂಲಿನಂತೆ ಸಾಗಿದೆ. ಜಿಲ್ಲೆಯಾದ್ಯಂತ ವ್ಯಾಪಕ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ವಾಹನ ಸಂಚಾರ ವಿರಳವಾಗಿತ್ತು.

ಬೆಂಗಳೂರು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬಲವಂತದ ಬಂದ್ ಮಾಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಮೆಜೆಸ್ಟಿಕ್​​ನಲ್ಲಿ ಬಸ್​​ಗೆ ಅಡ್ಡ ಮಲಗಿ ಆಕ್ರೋಶ: ಕರವೇ ಕಾರ್ಯಕರ್ತರು ಖಾಕಿ ವಶ
ಇತ್ತ ಮೆಜೆಸ್ಟಿಕ್​ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಸ್​ಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಮೆಜೆಸ್ಟಿಕ್​ ಬಸ್​ ನಿಲ್ದಾಣದಲ್ಲಿ ಕನ್ನಡಪರ ಹೋರಾಟಗಾರ ಸಾರಾ ಗೋವಿಂದು ಸೇರಿ​ ಧರಣಿ ನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಾ ಗೋವಿಂದು, ರೈತರಿಗೆ ಮಾರಕವಾದ ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯದ ಜನತೆ ನೈತಿಕ ಬೆಂಬಲವನ್ನು ಬಿಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಗೆ ಬೆಂಬಲ ನೀಡುವಂತೆ ಅವರು ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com