ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಸಾರ್ವಕರ್ ಫೋಟೋ: ವ್ಯಾಪಕ ಟೀಕೆ, ವಿವಾದ

ಬೆಂಗಳೂರಿನ ನಮ್ಮ ಮೆಟ್ರೋದ ಕೆಂಪೇಗೌಡ ಇಂಟರ್‌ಚೇಂಜ್ ಸ್ಟೇಷನ್‌ನಲ್ಲಿ ವಿಡಿ ಸಾವರ್ಕರ್ ಅವರ ಭಾವಚಿತ್ರವನ್ನು ಪ್ರದರ್ಶನಕ್ಕೆ ಹಾಕಿರುವುದು ವಿವಾದಕ್ಕೆ ಗ್ರಾಸವಾಗಿದೆ.
ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಸಾರ್ವಕರ್ ಫೋಟೋ
ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಸಾರ್ವಕರ್ ಫೋಟೋ

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋದ ಕೆಂಪೇಗೌಡ ಇಂಟರ್‌ಚೇಂಜ್ ಸ್ಟೇಷನ್‌ನಲ್ಲಿ ವಿಡಿ ಸಾವರ್ಕರ್ ಅವರ ಭಾವಚಿತ್ರವನ್ನು ಪ್ರದರ್ಶನಕ್ಕೆ ಹಾಕಿರುವುದು ವಿವಾದಕ್ಕೆ ಗ್ರಾಸವಾಗಿದೆ.

ಇದೇ ಸಾವರ್ಕರ್ ವಿಚಾರವಾಗಿ ಶಿವಮೊಗ್ಗದಲ್ಲಿ  ಹಿಂಸಾಚಾರ-ಕೋಮುಸಂಘರ್ಷ ಸೃಷ್ಟಿಯಾಗಿತ್ತು. ಈ ಹಿನ್ನಲೆಯಲ್ಲಿ ಆರು ತಿಂಗಳ ಹಳೆಯ ಫೋಟೋ ಇದೀಗ ಮತ್ತೆ ಆನ್‌ಲೈನ್‌ನಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಮೆಜೆಸ್ಟಿಕ್‌ ನಿಲ್ದಾಣದ ಪಶ್ಚಿಮ ಪ್ರವೇಶದ ಮೆಟ್ಟಿಲುಗಳ ಪಕ್ಕದಲ್ಲಿ ಹಾಕಲಾದ ವರ್ಣಚಿತ್ರದ ಮುಂಭಾಗದಲ್ಲಿ ಚಂದ್ರಶೇಖರ್ ಆಜಾದ್ ಮತ್ತು ಉಧಮ್ ಸಿಂಗ್ ಮತ್ತು ಮೇಲಿನ ಎಡ ಮೂಲೆಯಲ್ಲಿ ಸಾವರ್ಕರ್ ಪೋಟೋ ಇದೆ. ಕುತೂಹಲವೆಂದರೆ ದಿನಗಟ್ಟಲೆ ಅದು ಗಮನಕ್ಕೆ ಬಂದಿರಲ್ಲ. ಆದರೆ, ಶಿವಮೊಗ್ಗದಲ್ಲಿ ಸಾವರ್ಕರ್ ಅವರ ಮೇಲಿನ ಗಲಾಟೆ ಹಿಂಸಾಚಾರಕ್ಕೆ ಕಾರಣವಾಗುತ್ತಿದ್ದಂತೆ ಸಾವರ್ಕರ್‌ ಫೋಟೋ ಹಾಕಿರುವ ನಿರ್ಧಾರವನ್ನು ಪ್ರಯಾಣಿಕರೊಬ್ಬರು ಪ್ರಶ್ನಿಸಿದ್ದಾರೆ.

ಸಾವರ್ಕರ್‌ ಫೋಟೋ ಹಾಕಿರುವ ಬಗ್ಗೆ ಬಿಎಂಆರ್‌ಸಿಎಲ್ ಅನಗತ್ಯವಾಗಿ ವಿವಾದ ಸೃಷ್ಟಿಸಿದೆ ಎಂದು ಕೆಲವು ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಿಗೆ ಬಿಎಂಆರ್‌ಸಿಎಲ್ ಪ್ರಾಮುಖ್ಯತೆ ನೀಡಬೇಕಿತ್ತು ಎಂದು ವಕೀಲ ಹಗೂ ಹೋರಾಟಗಾರ ವಿನಯ್ ಕೆ ಶ್ರೀನಿವಾಸ ಆರೋಪಿಸಿದರು.

ಕರ್ನಾಟಕದ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಮೆಟ್ರೋದವರು ಮರೆತಿದ್ದಾರೆ. ಸಾವರ್ಕರ್ ಒಬ್ಬ ದೇಶ ವಿಭಜಕ ಎಂದು ತಿಳಿದಿರುವ ಮೆಟ್ರೋ ಅಧಿಕಾರಿಗಳು ಅವರ ಭಾವಚಿತ್ರವನ್ನು ಹಾಕುವುದು ಬೇಡವಾಗಿತ್ತು. ಕೆಆರ್ ಮಾರುಕಟ್ಟೆ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಸಾರ್ವಜನಿಕ ಕಲೆಗೆ ಬಿಎಂಆರ್‌ಸಿಎಲ್ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್‌ಸಿಎಲ್ ಮೂಲಗಳು, ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯ ಚರ್ಚೆಯಾಗುತ್ತಿದೆ. ಇದು ನಮ್ಮ ಗೋಡೆಗಳನ್ನು ಸುಂದರಗೊಳಿಸಲು ಚಿತ್ರಕಲಾ ಪರಿಷತ್‌ನೊಂದಿಗಿನ ಒಪ್ಪಂದದ ಭಾಗವಾಗಿದೆ. ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು ನಮ್ಮ ಗೋಡೆಗಳನ್ನು ಅಲಂಕರಿಸಿವೆ. ಇದ್ದಕ್ಕಿದ್ದಂತೆ, ಕಳೆದ ಎರಡು ದಿನಗಳಿಂದ ವಿವಾದ ಭುಗಿಲೆದ್ದಿದ್ದು, ಅದು ಉಳಿಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಎರಡೂ ಕಡೆಯಿಂದ ಬಲವಾದ ಹೇಳಿಕೆಗಳ ಕೇಳಿಬರುತ್ತಿವೆ ಎನ್ನಲಾಗಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಇದುವರೆಗೆ ಯಾವುದೇ ಕಡೆಯಿಂದ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಯಾವುದೇ ಅಧಿಕೃತ ಸಂವಹನ ಅಥವಾ ದೂರನ್ನು ಸ್ವೀಕರಿಸಿಲ್ಲ ಎಂದು ಮತ್ತೊಂದು ಮೂಲಗಳು ತಿಳಿಸಿವೆ. ‘ಭುತ್ವ ಕರ್ನಾಟಕ’ ಎಂಬ ಸಂಘಟನೆಯು ಚಿತ್ರಕಲೆಗೆ ಆಕ್ಷೇಪ ವ್ಯಕ್ತಪಡಿಸಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದು ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. “ಹಲೋ, BMRCL ಅಧಿಕಾರಿಗಳೇ, ನೀವು ಸಾವರ್ಕರ್ ಅವರ ಫೋಟೋವನ್ನು ಏಕೆ ಹಾಕಿದ್ದೀರಿ? ಅವರ ಕೊಡುಗೆ ಏನು? ಬ್ರಿಟಿಷರ ಕ್ಷಮೆ ಕೇಳಿದವರನ್ನು ನಾವೇಕೆ ಗೌರವಿಸಬೇಕು? ನಿಮಗೆ ಬೇರೆ ಯಾರೂ ಸಿಗಲಿಲ್ಲವೇ, ಇದು ಯಾರ ಆದೇಶ? ” ಪೋಸ್ಟ್ ಪ್ರಶ್ನಿಸಿದೆ.

ಬಿಎಂಆರ್ ಸಿಎಲ್ ಫೋಟೋಗೆ ಟೀಕೆಗಳು ಎದುರಾಗುತ್ತಲೇ ಇದಕ್ಕೆ ಹಲವರು ಬೆಂಬಲ ಕೂಡ ವ್ಯಕ್ತಪಡಿಸಿದ್ದು, ಇದಕ್ಕೆ ದೀಪಕ್ ಪೈ ಎಂಬುವವರು ಪ್ರತಿಕ್ರಿಯಿಸಿದ್ದಾರೆ. “ಭಾರತವನ್ನು ವಿಭಜಿಸಿದ ಬ್ರಿಟಿಷರ ಪ್ರಸಿದ್ಧ ಏಜೆಂಟರು ಜಿನ್ನಾ ಮತ್ತು ನೆಹರು. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ. ಭಾರತೀಯ ಸಂಸತ್ತಿನಲ್ಲಿ ಸಾವರ್ಕರ್ ಫೋಟೋ ಇದೆ. ಅದನ್ನು ತೆಗೆದುಹಾಕಲು ನಿಮಗೆ ಧೈರ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ. ಇನ್ನು ಈ ವಿವಾದದ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆಯೇ ಎಂಬ ಪ್ರಶ್ನೆಗೆ ಹಿರಿಯ ಅಧಿಕಾರಿಯೊಬ್ಬರು, “ನಮ್ಮ ನಿಲ್ದಾಣಗಳು ಯಾವಾಗಲೂ ಸುರಕ್ಷಿತವಾಗಿವೆ. ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಾಕಷ್ಟು ಸಂಖ್ಯೆಯ ಸಿಬ್ಬಂದಿಯನ್ನು ಪೋಸ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com