

ಹುಬ್ಬಳ್ಳಿ: ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆ (Infosys) ಆಗಸ್ಟ್ 1 ರಂದು ಹುಬ್ಬಳ್ಳಿ ಕ್ಯಾಂಪಸ್‌ನಿಂದ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.
ಈ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಇಚ್ಛೆಯುಳ್ಳ ನೌಕರರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಐಟಿ ದೈತ್ಯ ಸಂಸ್ಥೆ ಇನ್ಫೋಸಿಸ್, ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ 2018 ರಲ್ಲಿ 3.64 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಕ್ಯಾಂಪಸ್ ನಿರ್ಮಿಸಿತ್ತು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ವಿಶೇಷ ಆರ್ಥಿಕ ವಲಯದ ಅಡಿಯಲ್ಲಿ 43.05 ಎಕರೆ ಭೂಮಿಯನ್ನು ಇದಕ್ಕಾಗಿ ಮಂಜೂರು ಮಾಡಿತ್ತು.
ಹುಬ್ಬಳ್ಳಿಯ ಜನರು ನಗರದಲ್ಲಿ ಲಭ್ಯವಿರುವ ಕ್ಯಾಂಪಸ್ ನ್ನು ಬಳಸಿಕೊಳ್ಳುವಂತೆ ಕಂಪನಿಯನ್ನು ಒತ್ತಾಯಿಸಿ ಕಳೆದ ತಿಂಗಳು #StartInfosysHubli ಅಭಿಯಾನವನ್ನು ಪ್ರಾರಂಭಿಸಿದ್ದರು. ಸಿಎಂಗೆ 10,000 ಪತ್ರಗಳನ್ನು ಬರೆದು ಕ್ಯಾಂಪಸ್ ನ್ನು ಕಾರ್ಯಗತಗೊಳಿಸುವಂತೆ ಒತ್ತಾಯಿಸಿದ್ದರು.
ಇನ್ಫೋಸಿಸ್ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದರೆ, ಇತರ ಕೇಂದ್ರಗಳು ಮೈಸೂರು ಮತ್ತು ಮಂಗಳೂರಿನಲ್ಲಿವೆ. ಕಳೆದ ಜುಲೈ 15 ರಂದು ತನ್ನ ಹುಬ್ಬಳ್ಳಿ ಕ್ಯಾಂಪಸ್‌ನಲ್ಲಿ ಸಿಬ್ಬಂದಿಗಳೊಂದಿಗೆ ಇನ್ಫೋಸಿಸ್ ಸಭೆ ನಡೆಸಿತ್ತು, ಅಸೋಸಿಯೇಟ್ ಉಪಾಧ್ಯಕ್ಷ ನಿತ್ಯಾನಂದ್ ಯಶವಂತ ಇದರ ಅಧ್ಯಕ್ಷತೆ ವಹಿಸಿದ್ದರು.
ಹುಬ್ಬಳ್ಳಿ ಅಭಿವೃದ್ಧಿ ಕೇಂದ್ರದಲ್ಲಿ (ಡಿಸಿ) ಕೆಲಸ ಮಾಡಲು ಆಸಕ್ತಿ ಇದ್ದರೆ ಒಪ್ಪಿಗೆ ಪತ್ರವನ್ನು ನೀಡುವಂತೆ ಸಂಸ್ಥೆಯು ನೌಕರರನ್ನು ಕೇಳಿತ್ತು. ಹಲವು ಸಿಬ್ಬಂದಿಗಳು ಹುಬ್ಬಳ್ಳಿ ಜಿಲ್ಲಾಧಿಕಾರಿ ಕಚೇರಿಯಿಂದ ಕೆಲಸ ಮಾಡಲು ಆಸಕ್ತಿ ತೋರಿದ್ದಾರೆ. ಆದಾಗ್ಯೂ ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಅಭಿಯಾನದ ನೇತೃತ್ವ ವಹಿಸಿದ್ದ ನಾಗರಿಕ ಕಾರ್ಯಕರ್ತ ಸಂತೋಷ ನರಗುಂದ ಸಂಸ್ಥೆಯ ನಡೆಯನ್ನು ಸ್ವಾಗತಿಸಿದ್ದಾರೆ.