

ಬೆಂಗಳೂರು: ವೈಟ್‌ಫೀಲ್ಡ್ ಡಿಪೋ ಮತ್ತು ಪಟ್ಟಂದೂರು ಅಗ್ರಹಾರ (ಐಟಿಪಿಎಲ್) ಮೆಟ್ರೋ ನಿಲ್ದಾಣದ ನಡುವೆ ಆರು ಬೋಗಿಗಳ ಮೆಟ್ರೋ ರೈಲಿನ ಮೊದಲ ಪ್ರಾಯೋಗಿಕ ಸಂಚಾರವನ್ನು ಶುಕ್ರವಾರ ಯಶಸ್ವಿಯಾಗಿ ನಡೆಸಲಾಗಿದ್ದು, ಶೀಘ್ರದಲ್ಲೇ ಈ ಭಾಗದಲ್ಲಿ ಅಧಿಕೃತವಾಗಿ ಪ್ರಯಾಣಿಕರ ಸಂಚಾರ ಆರಂಭವಾಗಲಿದೆ.
ಈ ಭಾಗದ ಐಟಿ-ಬಿಟಿ ಉದ್ಯೋಗಿಗಳ ದಶಕಗಳ ಕನಸಾಗಿದ್ದ ವೈಟ್‌ಫೀಲ್ಡ್-ಐಟಿಪಿಎಲ್ ಮೆಟ್ರೋ ಸಂಚಾರ ಶೀಘ್ರದಲ್ಲೇ ಕಾರ್ಯಯೋಜನೆಗೆ ಬರಲಿದ್ದು, ಮೆಟ್ರೋ ಕಾಮಗಾರಿಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ. ಬೆಂಗಳೂರು ಮೆಟ್ರೋದ ಹಂತ-II ರ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದ ಭಾಗವಾಗಿ ನಾಲ್ಕು ನಿಲ್ದಾಣಗಳನ್ನು ಒಳಗೊಂಡಿರುವ ಈ 3.5-ಕಿಮೀ ವಿಸ್ತರಣೆಯು ಪ್ರಯೋಗದ ಪ್ರಾರಂಭವು ಹೆಚ್ಚು ಮಹತ್ವದ್ದಾಗಿದೆ. ಇದರ ಉಡಾವಣೆಯನ್ನು ಐಟಿ ಕಂಪನಿಯ ಉದ್ಯೋಗಿಗಳು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದರು.
ಶುಕ್ರವಾರ ವೈಟ್‌ಫೀಲ್ಡ್-ಐಟಿಪಿಎಲ್ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ಸಿಕ್ಕಿದ್ದು, ಬಿಎಂಆರ್‌ಸಿಎಲ್ ಅಧಿಕಾರಿಗಳು, ಸಿಬ್ಬಂದಿ ಈ ಕ್ಷಣಕ್ಕೆ ಸಾಕ್ಷಿಯಾದರು. ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಸಿಬ್ಬಂದಿಗಳ ಜೊತೆ ಪೂಜೆ ಸಲ್ಲಿಸುವ ಮೂಲಕ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದರು. ನೇರಳೆ ಮಾರ್ಗದಲ್ಲಿ ರೈಲು ಪ್ರಾಯೋಗಿಕ ಸಂಚಾರ ಆರಂಭಿಸಿದೆ.
ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದಲ್ಲಿ ವೈಟ್‌ಫೀಲ್ಡ್-ಐಟಿಪಿಎಲ್ ನಡುವೆ ಮಾತ್ರ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಬಿಎಂಆರ್‌ಸಿಎಲ್ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದಲ್ಲಿ ಅಕ್ಟೋಬರ್ 25ರಿಂದ ಪ್ರಾಯೋಗಿಕ ಸಂಚಾರ ನಡೆಸಲಿದೆ. ಬಿಎಂಆರ್‌ಸಿಎಲ್ ಈ ವರ್ಷದ ಡಿಸೆಂಬರ್ ವೇಳೆಗೆ ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವಿನ ಸುಮಾರು 15 ಕಿ. ಮೀ. ಮಾರ್ಗವನ್ನು ಉದ್ಘಾಟಿಸುವ ಗುರಿ ಹೊಂದಿದೆ. ಇದಕ್ಕಾಗಿ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಲಾಗಿದೆ.
ಈ ಪ್ರಾಯೋಗಿಕ ಸಂಚಾರದ ಅವಧಿಯಲ್ಲಿ ಮಾರ್ಗದ ನಡುವಿನ ಸಂಚಾರದ ಸಮಯ, ಸಿಗ್ನಲ್, ನಿಲ್ದಾಣದ ಮೂಲ ಸೌಕರ್ಯಗಳು, ಹಳಿಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಪ್ರಾಯೋಗಿಕ ಸಂಚಾರಕ್ಕಾಗಿಯೇ ಆರು ಬೋಗಿಗಳನ್ನು ಬೈಯ್ಯಪ್ಪನಹಳ್ಳಿ ನಮ್ಮ ಮೆಟ್ರೋ ಡಿಪೋದಿಂದ ತರಲಾಗಿತ್ತು. ನಾಲ್ಕು ವಾರಗಳ ಕಾಲ ಪ್ರಾಯೋಗಿಕ ಸಂಚಾರ ನಡೆಯಲಿದ್ದು, ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಮಾರ್ಗದಲ್ಲಿ ಪರಿಶೀಲನೆ ನಡೆಸಲು ಬಿಎಂಆರ್‌ಸಿಎಲ್ ಮನವಿ ಮಾಡಲಿದೆ. ಆಯುಕ್ತರು ಪರಿಶೀಲನೆ ನಡೆಸಿದ ಬಳಿಕ ಮಾರ್ಗದಲ್ಲಿ ವಾಣಿಜ್ಯ ಸಂಚಾರಕ್ಕೆ ಚಾಲನೆ ಸಿಗಲಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಕಾಮಗಾರಿ: TBM ಅವನಿ ಸೇವೆಯಿಂದ ಹೊರಗೆ!!
ಈ ಮೆಟ್ರೋ ಮಾರ್ಗದಲ್ಲಿ ರೈಲುಗಳು ಸಂಚಾರ ಆರಂಭವಾದರೆ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಹಾಯಕವಾಗಲಿದೆ. ಕ್ಯಾಬ್ ಅಥವಾ ಖಾಸಗಿ ವಾಹನಗಳ ಮೂಲಕ ಸಂಚಾರ ನಡೆಸುವುದು ತಪ್ಪಲಿದೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿರುವ ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಅವರು, 'ನಾವು ವೈಟ್‌ಫೀಲ್ಡ್ ಡಿಪೋದಿಂದ ಮಧ್ಯಾಹ್ನ 12.20 ಕ್ಕೆ ಪ್ರಾಯೋಗಿಕ ಸಂಚಾರವನ್ನು ಪ್ರಾರಂಭಿಸಿದ್ದು, ಅದನ್ನು ಮಧ್ಯಾಹ್ನ 1.40 ಕ್ಕೆ ಕೊನೆಗೊಳಿಸಿದ್ದೇವೆ, ಗಂಟೆಗೆ 15 ಕಿಮೀ ವೇಗದಲ್ಲಿ ಈ ಪ್ರಾಯೋಗಿಕ ಸಂಚಾರ ಓಡುತ್ತದೆ. ಇದು ಸುಗಮ ಸವಾರಿ, ಟ್ರ್ಯಾಕ್ ಉತ್ತಮವಾಗಿ ಮಾಡಲಾಗಿದೆ ಮತ್ತು ನಮಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿಯಲು ನೆರವಾಗುತ್ತದೆ. ರೋಲಿಂಗ್ ಸ್ಟಾಕ್, ಎಲೆಕ್ಟ್ರಿಕಲ್ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆಯ ನಿರ್ದೇಶಕ ಎನ್ ಎಂ ಧೋಕ್ ಮತ್ತು ಪ್ರಾಜೆಕ್ಟ್ ಮ್ಯಾನೇಜರ್ ಜಿತೇಂದ್ರ ಝಾ ಅವರು ಚೊಚ್ಚಲ ಪ್ರಯಾಣದಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ಈ ಸಾಧನೆಗೆ ಕಾರಣರಾದ ಸಿಬ್ಬಂದಿಗಳನ್ನು ಶ್ಲಾಘಿಸಿದ ಅವರು, ಅಕ್ಟೋಬರ್ 25 ರಿಂದ ಪ್ರಾರಂಭವಾದಾಗ ಮೆಟ್ರೋ ಮತ್ತು BEML ಸಿಬ್ಬಂದಿಗಳು ಮಾಡಿದ ಪ್ರಯತ್ನಗಳು ಮತ್ತು ನಿದ್ದೆಯಿಲ್ಲದ ರಾತ್ರಿಗಳನ್ನು ನೆನೆಯಬೇಕು. ಪ್ರಯೋಗಗಳು ಪೂರ್ಣಗೊಂಡ ನಂತರ, ಸುರಕ್ಷತೆ ಮತ್ತು ಸಿಗ್ನಲಿಂಗ್‌ನ ಭರವಸೆಗಾಗಿ ಸ್ವತಂತ್ರ ಪರಿಶೀಲನೆಯನ್ನು ಮಾಡಲಾಗುತ್ತದೆ. ಅದರ ನಂತರ ಮೆಟ್ರೋ ರೈಲು ಸುರಕ್ಷತೆ (ಸಿಎಂಆರ್‌ಎಸ್) ಆಯುಕ್ತರನ್ನು ಪರೀಕ್ಷಾರ್ಥ ಚಾಲನೆಗೆ ಆಹ್ವಾನಿಸಲಾಗುವುದು. ಪ್ರಯೋಗಗಳು ಕ್ರಮೇಣ ಗರುಡಾಚಾರ್ಪಾಳ್ಯವನ್ನು ಮುಟ್ಟುತ್ತವೆ ಮತ್ತು ಫೆಬ್ರವರಿ 2023 ರ ವೇಳೆಗೆ ಪರೀಕ್ಷಾರ್ಥ ಚಾಲನೆ ಮುಕ್ತಾಯಗೊಳ್ಳುತ್ತವೆ, ನಂತರ CMRS ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ ಎಂದು ಪರ್ವೇಜ್ ಹೇಳಿದರು.
"ನಾವು ನಂತರ ಸರ್ಕಾರದೊಂದಿಗೆ ಚರ್ಚಿಸುತ್ತೇವೆ ಮತ್ತು ಈ ವಿಸ್ತರಣೆಯನ್ನು ಮಾತ್ರ ಕಾರ್ಯಗತಗೊಳಿಸಬಹುದೇ ಅಥವಾ ನಾವು ಸಂಪೂರ್ಣ ಮಾರ್ಗವನ್ನು ಪ್ರಾರಂಭಿಸುತ್ತೇವೆಯೇ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುತ್ತೇವೆ. ಏಕಕಾಲದಲ್ಲಿ ಕೆಆರ್ ಪುರಂನಿಂದ ಬೈಯಪ್ಪನಹಳ್ಳಿವರೆಗೆ ಬಾಕಿ ಉಳಿದಿರುವ ಭಾಗದ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.
Advertisement