ಶಿವರಾಮ ಕಾರಂತ ಬಡಾವಣೆ ಟೆಂಡರ್‌ ವಿವಾದ: ಬಿಡಿಎ ರಾಜ್ಯ ಸರ್ಕಾರದ ಇಲಾಖೆ ಅಲ್ಲ ಎಂದ ಸುಪ್ರೀಂ ಕೋರ್ಟ್‌

ಶಿವರಾಮ ಕಾರಂತ ಬಡಾವಣೆ ಟೆಂಡರ್‌ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ನೀಡಿರುವ ಸುಪ್ರೀಂ ಕೋರ್ಟ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕರ್ನಾಟಕ ಸರ್ಕಾರದ ಇಲಾಖೆ ಅಲ್ಲ ಎಂದು ಹೇಳಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಟೆಂಡರ್‌ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ನೀಡಿರುವ ಸುಪ್ರೀಂ ಕೋರ್ಟ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕರ್ನಾಟಕ ಸರ್ಕಾರದ ಇಲಾಖೆ ಅಲ್ಲ ಎಂದು ಹೇಳಿದೆ.

ಶಿವರಾಮ ಕಾರಂತ ಬಡಾವಣೆ ಟೆಂಡರ್‌ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಡೆದ ವಿಚಾರಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕರ್ನಾಟಕ ಸರ್ಕಾರದ ಇಲಾಖೆ ಅಲ್ಲ. ಹಾಗಾಗಿ, ಬೆಂಗಳೂರಿನಲ್ಲಿ ಡಾ.ಶಿವರಾಮ ಕಾರಂತ ಬಡಾವಣೆಗೆ ಟೆಂಡರ್ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆಯುವ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದೆ. 

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಸಂಪೂರ್ಣ ಭೂಮಿಗೆ 6 ವಾರಗಳ ಒಳಗೆ ಅರ್ಹತಾ ಪ್ರಮಾಣಪತ್ರಗಳನ್ನು ಪ್ರಾಧಿಕಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅಬ್ದುಲ್‌ ಎಸ್‌.ನಜೀರ್‌ ಹಾಗೂ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ಪೀಠ ನಿರ್ದೇಶನ ನೀಡಿದೆ. ಅಂತೆಯೇ ಒಂದು ವೇಳೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ. 

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 1976ರ ಸೆಕ್ಷನ್‌ 3 ಅಡಿಯಲ್ಲಿ ಪ್ರಾಧಿಕಾರವನ್ನು ರಚಿಸಲಾಗಿದೆ. ಇದು ಶಾಶ್ವತ ಉತ್ತರಾಧಿಕಾರ ಹೊಂದಿರುವ ಸಂಸ್ಥೆ. ಪ್ರಾಧಿಕಾರವು ಭೂ ಸ್ವಾಧೀನ ಮಾಡುವ, ವಿಲೇವಾರಿ ಮಾಡುವ ಅಧಿಕಾರ ಹೊಂದಿದೆ. ಅಲ್ಲದೆ, ಕಾಯ್ದೆಯಡಿ ಮಂಜೂರಾದ ಯೋಜನೆಗಳನ್ನು ಕಾರ್ಯಗತ ಮಾಡುವ ಅಧಿಕಾರವನ್ನು ಪ್ರಾಧಿಕಾರ ಹೊಂದಿದೆ. ಟೆಂಡರ್ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆಗಾಗಿ ಪ್ರಾಧಿಕಾರವು ಪ್ರಸ್ತಾವನೆ ಸಲ್ಲಿಸುವುದು ಅನಗತ್ಯ. ಇಂತಹ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವುದು ಸರ್ಕಾರಕ್ಕೆ ಕೂಡಾ ಕಾನೂನಾತ್ಮಕವಾಗಿ ಕಡ್ಡಾಯ ಅಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. 

ಶಿವರಾಮ ಕಾರಂತ ಬಡಾವಣೆಯನ್ನು 17 ವಿವಿಧ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ರಚಿಸುವ ಯೋಜನೆಗೆ ರಾಜ್ಯ ಸರ್ಕಾರ ಜುಲೈ 8ರಂದು ಅನುಮೋದನೆ ನೀಡಿತ್ತು. ಒಟ್ಟು 3,546 ಎಕರೆ 12 ಗುಂಟೆಯಲ್ಲಿ ಬಡಾವಣೆ ರಚಿಸಲು ₹5,337 ಕೋಟಿ ಮೊತ್ತದ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿತ್ತು. ಈ ಯೋಜನೆಗೆ ಸರ್ಕಾರದ ಅನುಮೋದನೆಯ ಅಗತ್ಯ ಇಲ್ಲ ಎಂದೂ ಕೋರ್ಟ್‌ ಹೇಳಿದೆ.

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 2018ಕ್ಕೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಪಾಲನಾ ವರದಿಯನ್ನು ಪರಿಶೀಲಿಸಿದ ನ್ಯಾಯಪೀಠವು, ವಿವಿಧ ಬಡಾವಣೆಗಳಲ್ಲಿ 96 ಪರ್ಯಾಯ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ನೀಡುವಂತೆ ಬಿಡಿಎಗೆ ಸೂಚಿಸಿತು.

ಆಗಸ್ಟ್‌ 8ರಂದು ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ನಂತರ ಪೀಠವು, ಈವರೆಗೆ ಕೇವಲ 53 ಸ್ವಾಧೀನ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಸ್ವಾಧೀನಪಡಿಸಿಕೊಂಡ ಸಂಪೂರ್ಣ ಭೂಮಿಗೆ ಆರು ವಾರಗಳೊಳಗೆ ಅರ್ಹತಾ ಪ್ರಮಾಣಪತ್ರಗಳನ್ನು ನೀಡಬೇಕು ಎಂದೂ ನಿರ್ದೇಶನ ನೀಡಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com