ಬೆಂಗಳೂರು: ಕಳೆದ 2 ತಿಂಗಳಲ್ಲಿ ಬೆಂಗಳೂರಿನ 13 ಮಂದಿ ಸೇರಿದಂತೆ 27 ಮಂದಿ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿ, ಸುಮಾರು ರೂ.15 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ (ಎನ್'ಸಿಬಿ) ಬೆಂಗಳೂರು ವಲಯ ಮಾಹಿತಿ ನೀಡಿದೆ.
ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ (ಎನ್'ಸಿಬಿ)ದ ನಿರ್ದೇಶಕ ಪಿ ಅರವಿಂದನ್ ಅವರು ಮಾತನಾಡಿ, ಮಹಿಳೆಯರು ಸೇರಿದಂತೆ 27 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಕಳೆದ 2 ತಿಂಗಳಿನಲ್ಲಿ 9 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಸುಮಾರು ರೂ.15 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ ಜೊತೆಗೆ ಎಲ್‌ಎಸ್‌ಡಿ, ಕೊಕೇನ್, ಹ್ಯಾಶಿಶ್ ಸೇರಿದಂತೆ ಇದರೆ ಡ್ರಗ್ಸ್'ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಎನ್'ಸಿಬಿ ಕೇವಲ ವ್ಯಕ್ತಿಗಳನ್ನು ಬಂಧಿಸಿ, ವಸ್ತುಗಳನ್ನು ವಶಪಡಿಸಿಕೊಳ್ಳುವುದಷ್ಟೇ ಅಲ್ಲದೆ, ಹಣಕಾಸು ನೆರವು, ಡ್ರಗ್ಸ್ ಸಾಗಣೆ ಹಾಗೂ ವಿತರಣೆಯಲ್ಲಿ ತೊಡಗಿರುವ ವ್ಯಕ್ತಿಗಳ ಬಂಧಿಸುವಲ್ಲಿಯೂ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತರು 20-25 ವರ್ಷದ ವಯೋಮಾನದವರಾಗಿದ್ದು, ಕೋಲ್ಕತಾ, ಚೆನ್ನೈ ಮತ್ತು ದೆಹಲಿಯಿಂದ ಬಂದು ಹಲವು ದಿನಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. 27 ಮಂದಿ ಪೈಕಿ 13 ಮಂದಿ ಬೆಂಗಳೂರಿನವರಾಗಿದ್ದು, ಇರಾನ್, ದೆಹಲಿ, ಮುಂಬೈ, ಹರಿಯಾಣ ಮಿಜೋರಾಮ್, ರಾಜಸ್ಥಾನ ಮತ್ತು ಉತ್ತರಪ್ರದೇಶದ ತಲಾ ಒಬ್ಬರು, ಕೋಲ್ಕತಾ ಮತ್ತು ತಮಿಳನಾಡಿನ ತಲಾ ಇಭ್ಬರು ಮತ್ತು ಹೈದರಾಬಾದ್'ನ ಮೂವರು ಬಂಧನಕ್ಕೊಳಗಾಗಿರುವ ಆರೋಪಿಗಳಾಗಿದ್ದಾರೆ.
ಬಂಧಿತರಲ್ಲಿ ಹಲವು ಉತ್ತಮ ವಿದ್ಯಾಭ್ಯಾಸ ಮಾಡಿದ್ದು, ನಗರದಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲವರು ಉದ್ಯೋಗದಲ್ಲಿದ್ದರು. ವಾಟ್ಸಾಪ್ ಹಾಗೂ ಟೆಲಿಗ್ರಾಂ ಆ್ಯಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು. ಬಿಟ್ ಕಾಯಿನ್ ಹಾಗೂ ಆನ್'ಲೈನ್ ಮೂಲಕ ವ್ಯವಹರಿಸುತ್ತಿದ್ದರು. ಈ ಆರೋಪಿಗಳ ಕುರಿತು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಲಾಗಿದೆ.
ಬಂಧಿತ 25 ಮಂದಿಯ ಪೈಕಿ ಓರ್ವ ಪಶ್ಚಿಮ ಬಂಗಾಳ ಮೂಲದ ಡ್ರಗ್ಸ್ ಪೂರೈಕೆದಾರನಾಗಿದ್ದು, ಸ್ಥಳೀಯ ಕೊರಿಯರ್ ಕಂಪನಿ ಮೂಲಕ ಬೆಂಗಳೂರು ಸೇರಿದಂತೆ ದೇಶದ ವಿವಿಧಡೆಗೆ ಆತ ಡ್ರಗ್ಸ್ ಪೂರೈಸುತ್ತಿದ್ದ. ಡ್ರಗ್ಸ್ ಬಯಸಿ ವಾಟ್ಸಾಪ್ ಮೂಲಕ ಆತನನ್ನು ಗ್ರಾಹಕರು ಸಂಪರ್ಕಿಸುತ್ತಿದ್ದರು ಎಂದು ಅರವಿಂದನ್ ಮಾಹಿತಿ ನೀಡಿದ್ದಾರೆ.
Advertisement