ಬೆಂಗಳೂರು: ಪೆರೋಲ್ ಮೇಲೆ ಹೊರಬಂದು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೈದಿಯ ಬಂಧನ!

ಡಕಾಯಿತಿ ಹಾಗೂ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿ ಪೆರೋಲ್‌ ಮೇಲೆ ಹೊರಗೆ ಬಂದು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೈದಿಯನ್ನು ಬಂಧಿಸುವಲ್ಲಿ ಮಡಿವಾಳ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೈದಿ ಸುಹೇಲ್ ನನ್ನು ಬಂಧಿಸಿದ ಪೊಲೀಸರು.
ಕೈದಿ ಸುಹೇಲ್ ನನ್ನು ಬಂಧಿಸಿದ ಪೊಲೀಸರು.

ಮಂಗಳೂರು: ಡಕಾಯಿತಿ ಹಾಗೂ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿ ಪೆರೋಲ್‌ ಮೇಲೆ ಹೊರಗೆ ಬಂದು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೈದಿಯನ್ನು ಬಂಧಿಸುವಲ್ಲಿ ಮಡಿವಾಳ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಮ್ಮನಪಾಳ್ಯ ನಿವಾಸಿ ಮೊಹಮ್ಮದ್ ಸುಹೇಲ್ ಅಲಿಯಾಸ್ ಮಹಮ್ಮದ್ ಅಯಾಜ್ (45) ಬಂಧಿತ ಕೈದಿಯಾಗಿದ್ದಾನೆ. ತನ್ನ ಮೂಲ ಹೆಸರು ಬದಲಾಯಿಸಿಕೊಂಡಿದ್ದ ಕೈದಿ, ಪೊಲೀಸರ ದಿಕ್ಕು ತಪ್ಪಿಸಿ ಆಯುರ್ವೇದಿಕ್‌ ವೈದ್ಯನಾಗಿ ಕೆಲಸ ಮಾಡುತ್ತಿದ್ದ.

ಸುಹೇಲ್‌ ಬಂಧನಕ್ಕೆ ಆತನ ಸಹಚರನ ಅನಿರೀಕ್ಷಿತ ಸಾವು ಹಾಗೂ ಒಂದು ಜಿಎಸ್‌ಟಿ ಬಿಲ್‌ ಪೊಲೀಸರಿಗೆ ನೆರವಾಗಿದ್ದು ಪ್ರಕರಣದ ವಿಶೇಷವಾಗಿದೆ.

ಸುಹೇಲ್ ಮತ್ತು ಈತನ ಸಹಚರ ಮಾಜಿ ಸೈನಿಕರೊಬ್ಬರನ್ನು ಹತ್ಯೆ ಮಾಡಿದ್ದರು. ಪ್ರಕರಣ ಸಂಬಂಧ 2004 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಮಾರ್ಚ್ 2007 ರಲ್ಲಿ, ಸುಹೇಲ್ ಪೆರೋಲ್ ಮೇಲೆ ಹೊರಬಂದಿದ್ದ. ಆದರೆ ಜೈಲಿಗೆ ಹಿಂತಿರುಗಿರಲಿಲ್ಲ.

ಹೈಕೋರ್ಟ್ ಇತ್ತೀಚೆಗೆ ಪೆರೋಲ್ ಪಡೆದು ನಾಪತ್ತೆಯಾದವರ ಪತ್ತೆಹಚ್ಚಲು ಆದೇಶಿಸಿದ ಬಳಿಕ ಸುಹೇಲ್ ಪ್ರಕರಣದ ಬಗ್ಗೆ ಪೊಲೀಸರು ಕಣ್ಣು ಹಾಯಿಸಿದ್ದರು. ನಂತರ ಮಡಿವಾಳ ಪೊಲೀಸರು ಸುಹೇಲ್ನನ್ನು ಹಿಡಿಯಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.

ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಶಂಕರ್ ಕೂಡ ಪೆರೋಲ್ ಮೇಲೆ ಹೊರ ಬಂದಿದ್ದ. 2017ರಲ್ಲಿ ಈತ ಸಾವನ್ನಪ್ಪಿದ್ದ. ಈತ ಅಸಹಜವಾಗಿ ಸಾವನ್ನಪ್ಪಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.

ಸಾವನ್ನಪ್ಪುವುದಕ್ಕೂ ಮುನ್ನ ಶಂಕರ್ ತನ್ನ ಆದಾಯದ ಮೂಲ ಕುರಿತು ಸ್ನೇಹಿತ ದಿನೇಶ್'ಗೆ ಮಾಹಿತಿ ನೀಡಿದ್ದ. ಉಪ್ಪಿನಂಗಡಿಗೆ ಹೋಗಿ ಸ್ನೇಹಿತನ ಭೇಟಿ ಮಾಡಿ, ಹಣ ಪಡೆದುಕೊಳ್ಳುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ಆತ  ಹಣವನ್ನು ತೆಗೆದುಕೊಂಡ ಕಚೇರಿಯ ಹೆಸರೇ ಸಾಗರ್ ಎಂಟರ್‌ಪ್ರೈಸಸ್ ನಮಗೆ ಆರೋಪಿಯ ಸೆರೆಗೆ ಸುಳಿವಾಗಿತ್ತು.

ಅದರ ಜಿಎಸ್‌ಟಿ ಬಿಲ್‌ ಮೊಹಮದ್‌ ಅಯಾಜ್‌ ಹೆಸರಿನಲ್ಲಿರುವುದು ಕಂಡು ಬಂದಿತ್ತು. ಈ ಸುಳಿವು ಆಧರಿಸಿ ಮೊಹಮದ್‌ ಅಯಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನೇ ಸುಹೇಲ್‌ ಎಂಬುದು ಧೃಡಪಟ್ಟಿತ್ತು.

15 ವರ್ಷಗಳಿಂದ ದೈಹಿಕವಾಗಿ ಬದಲಾವಣೆಯಾಗಿದ್ದ ಸುಹೇಲ್‌ ಬೆನ್ನಿನ ಹಿಂಭಾಗದ ಒಂದು ಮಚ್ಚೆ, ಮುಖದ ಮೇಲಿನ ಗಾಯದ ಗುರುತು ಆತನೇ ಸುಹೇಲ್‌ ಎಂಬುದನ್ನು ದೃಢೀಕರಿಸಿದ್ದವು. ಆರೋಪಿ ಸುಹೇಲ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತನ ವಿರುದ್ಧ ಮಡಿವಾಳ ಹಾಗೂ ಜಯನಗರ ಠಾಣೆಯಲ್ಲಿ ಕನ್ನಕಳವು ಪ್ರಕರಣ, ಶೇಷಾದ್ರಿಪುರ ಠಾಣೆಯಲ್ಲಿಒಂದು ಸುಲಿಗೆ ಪ್ರಕರಣವಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಉಪ್ಪಿನಂಗಡಿಗೆ ಸ್ಥಳಾಂತರಗೊಂಡಿದ್ದ ಸುಹೇಲ್‌ ಮೊದಲು ತನ್ನ ಹೆಸರು ಅಯಾಜ್‌ ಎಂದು ಬದಲಿಸಿಕೊಂಡಿದ್ದ. ಅದೇ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಮಾಡಿಸಿಕೊಂಡಿದ್ದ. ತನ್ನ ಅಪರಾಧ ಹಿನ್ನೆಲೆ ಮುಚ್ಚಿಟ್ಟು ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಜೈಲಿಂದ ಶಂಕರ್‌ ಹೊರಬಂದ ಬಳಿಕ ಆತನಿಗೂ ಜೈಲಿಗೆ ವಾಪಸ್‌ ಹೋಗಬೇಡ ಎಂದು ಹೇಳಿಕೊಟ್ಟಿದ್ದ. ಬಳಿಕ ಇಬ್ಬರೂ ಸೇರಿ ಸಾಗರ್‌ ಎಂಟರ್‌ಪ್ರೈಸಸ್‌ ಅಂಗಡಿ ನಡೆಸುತ್ತಿದ್ದರು. ಶಂಕರ್‌ ಮೃತಪಟ್ಟ ಬಳಿಕ ಎಂಟರ್‌ಪ್ರೈಸಸ್‌ ಮುಚ್ಚಿದ್ದ ಸುಹೇಲ್‌ ತಾನು ಆಯುರ್ವೇದ ವೈದ್ಯ ಎಂದು ಹೇಳಿಕೊಂಡು ಮನೆಯಲ್ಲಿಯೇ ಬಿಪಿ, ಶುಗರ್‌ ಸೇರಿದಂತೆ ಕಾಯಿಲೆಗಳಿಗೆ ಔಷಧ ಕೊಡುತ್ತಿದ್ದ ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com