87 ಕೋಟಿ ರೂ. ಹೆಚ್ಚುವರಿ ಆಸ್ತಿಯ ದಾಖಲೆ ಸಲ್ಲಿಕೆಗೆ ಜಮೀರ್‌ ಖಾನ್ ಗೆ ಎಸಿಬಿ ನೋಟಿಸ್

ಎಸಿಬಿ ದಾಳಿ ವೇಳೆ ಪತ್ತೆಯಾದ 87 ಕೋಟಿ ರೂ. ಹೆಚ್ಚುವರಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಎಸಿಬಿ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ನೋಟಿಸ್ ಜಾರಿ ಮಾಡಿದೆ.
ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮುಂದಿ ನಿಂತಿರುವ ಮಾಧ್ಯಮ ಪ್ರತಿನಿಧಿಗಳು
ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮುಂದಿ ನಿಂತಿರುವ ಮಾಧ್ಯಮ ಪ್ರತಿನಿಧಿಗಳು

ಬೆಂಗಳೂರು: ಎಸಿಬಿ ದಾಳಿ ವೇಳೆ ಪತ್ತೆಯಾದ 87 ಕೋಟಿ ರೂ. ಹೆಚ್ಚುವರಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಎಸಿಬಿ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ನೋಟಿಸ್ ಜಾರಿ ಮಾಡಿದೆ.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಕಳೆದ ವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆದಾಯಕ್ಕಿಂತ ಎರಡು ಸಾವಿರ ಪಟ್ಟು ಜಾಸ್ತಿ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ 87 ಕೋಟಿ ರೂ ಮೌಲ್ಯದ ಹೆಚ್ಚುವರಿ ಆಸ್ತಿಯ ಸಮರ್ಪಕ ದಾಖಲೆಗಳನ್ನು ಒದಗಿಸುವಂತೆ ಎಸಿಬಿ ಅಧಿಕಾರಿಗಳು ಶಾಸಕ ಜಮೀರ್ ಗೆ ಸೂಚನೆ ನೀಡಿದ್ದಾರೆ.

ದಾಳಿ ನಡೆದ ಮಾರನೇ ದಿನವೇ ಕಚೇರಿಗೆ ಬಂದು ದಾಖಲೆ ಒದಗಿಸುವಂತೆ ಎಸಿಬಿ ಅಧಿಕಾರಿಗಳು ತಿಳಿಸಿದ್ದು, ಬಕ್ರೀದ್ ಕಾರಣ ನೀಡಿ ಜಮೀರ್ ಕಾಲಾವಕಾಶ ಪಡೆದಿದ್ದರು. ಸದ್ಯ ಬಕ್ರೀದ್ ಮುಗಿದ ಕಾರಣ ಜಮೀರ್ ದಾಖಲೆ ಸಮೇತ ಎಸಿಬಿ ಅಧಿಕಾರಿಗಳ ಮುಂದೆ ಹಾಜರಾಗಬೇಕಿದೆ. ಈ ನಡುವೆ ಆದಾಯಕ್ಕಿಂತ ಶೇ.2031 ಪಟ್ಟು ಹೆಚ್ಚು ಅಕ್ರಮ ಆಸ್ತಿಯನ್ನು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಸಂಪಾದಿಸಿದ್ದಾರೆ ಎಂದು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಜಾರಿ ನಿರ್ದೇಶನಾಲಯ (ಇ.ಡಿ.) ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿತ್ತು. ಇಡಿ ವರದಿ ಆಧರಿಸಿ ಜಮೀರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ, ಜಮೀರ್ ಅವರ ಸಾಮ್ರಾಜ್ಯದ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ಜಪ್ತಿ ಮಾಡಿತ್ತು. ಜಮೀರ್ ಅವರು .87.44 ಕೋಟಿ ರೂ ಕೋಟಿ (ಶೇ.2031 ಪಟ್ಟು) ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಇಡಿ ಉಲ್ಲೇಖಿಸಿದ್ದು, ಈ ವರದಿ ಆಧರಿಸಿ ಶಾಸಕರ ವಿರುದ್ಧ ತನಿಖೆ ನಡೆಸಲು ಮುಂದಾಗಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸಮೀಪ ಬಂಬೂ ಬಜಾರ್‌ನಲ್ಲಿರುವ ಜಮೀರ್ ಅವರ ವೈಭವೋಪೇತ ಮನೆ, ಸದಾಶಿವ ನಗರದಲ್ಲಿರುವ ಅತಿಥಿ ಗೃಹ, ಕಲಾಸಿಪಾಳ್ಯದಲ್ಲಿನ ಅವರ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಂಪನಿಯ ಕಚೇರಿ, ಓಕಾ ಅಪಾರ್ಟ್ ಮೆಂಟ್ ಫ್ಲ್ಯಾಟ್ ಹಾಗೂ ಬನಶಂಕರಿಯ ಜಿ.ಕೆ.ಅಸೋಸಿಯೇಟ್ಸ್ ಕಚೇರಿ ಸೇರಿ ಐದು ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ಐಎಂಐ ಬಹುಕೋಟಿ ವಂಚನೆ ಪ್ರಕರಣದ ತನಿಖೆ ವೇಳೆ ಶಾಸಕ ಜಮೀರ್ ಅವರ ಆಸ್ತಿ ಬಗ್ಗೆ ಇಡಿ ಪತ್ತೆ ಹಚ್ಚಿತ್ತು.

ಆಸ್ತಿಯ ಶೋಧ:
ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ವಿರುದ್ಧ ತನಿಖೆ ಮುಂದುವರೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಈಗ ಜಮೀರ್ ಅವರ 16 ವರ್ಷ ಶಾಸಕರಾಗಿರುವ ಅವಧಿಯಲ್ಲಿ ಗಳಿಸಿದ ಸಂಪತ್ತಿನ ಬಗ್ಗೆ ಶೋಧನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. 2006ರಲ್ಲಿ ಉಪಚುನಾವಣೆ ಮೂಲಕ ಮೊದಲ ಬಾರಿಗೆ ಚಾಮರಾಜಪೇಟೆ ಕ್ಷೇತ್ರದ ಶಾಸಕರಾದ ಜಮೀರ್, ಅಂದಿನಿಂದ ಸತತವಾಗಿ ನಾಲ್ಕು ಬಾರಿ ಚುನಾಯಿತರಾಗಿದ್ದಾರೆ. ತಮ್ಮ ಶಾಸಕ ಸ್ಥಾನ ಬಳಸಿಕೊಂಡು ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಬಗ್ಗೆ ಎಸಿಬಿ ಅನುಮಾನಿಸಿದೆ. ಈ ಹಿನ್ನೆಲೆಯಲ್ಲಿ 2006ರ ಚುನಾವಣೆಗೆ ಸ್ಪರ್ಧಿಸಿದಾಗ ಸಲ್ಲಿಸಿದ್ದ ಆಸ್ತಿ ಪ್ರಮಾಣವನ್ನು ಕಲೆ ಹಾಕಿರುವ ಎಸಿಬಿ, ಆ ಮಾಹಿತಿ ಆಧರಿಸಿ ಈಗಿನ ಸಂಪತ್ತಿನ ಮೌಲ್ಯವರ್ಧನೆ ಮಾಡುತ್ತಿದೆ ಎನ್ನಲಾಗಿದೆ.

ಶಾಸಕರಾಗುವ ಮುನ್ನವೇ ಸಾರಿಗೆ (ನ್ಯಾಷನಲ್ ಟ್ರಾವೆಲ್ಸ್ ಏಜೆನ್ಸಿ) ಹಾಗೂ ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಉದ್ಯಮದಲ್ಲಿ ಜಮೀರ್ ತೊಡಗಿದ್ದರು. ನ್ಯಾಷನಲ್ ಟ್ರಾವೆಲ್ಸ್ ದೇಶ ವ್ಯಾಪ್ತಿ ಸಂಪರ್ಕ ಜಾಲ ಹೊಂದಿದೆ. ಅಲ್ಲದೆ ಅಗರ್ಭ ಶ್ರೀಮಂತಿಕೆಗೆ ಜಮೀರ್ ಹೆಸರು ವಾಸಿಯಾಗಿದ್ದರು. ಶಾಸಕ ಸ್ಥಾನ ಅವರ ಸಾರಿಗೆ ಹಾಗೂ ರಿಯಲ್ ಎಸ್ಟೇಟ್ ಸೇರಿದಂತೆ ಸ್ವಂತ ವ್ಯವಹಾರಗಳ ಬೆಳವಣಿಗೆಗೆ ನೆರವಾಗಿದೆಯೇ ಎಂಬುದು ಎಸಿಬಿ ತನಿಖೆಗೆ ಒಳಪಡಿಸಿದೆ. ತಮ್ಮ ಶಾಸಕ ಸ್ಥಾನ ದುರ್ಬಳಕೆ ಮಾಡಿದರೆ ಚುನಾಯಿತ ಪ್ರತಿನಿಧಿ ಕಾಯ್ದೆಯಡಿ ಕ್ರಮ ಜರುಗಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಲೆಕ್ಕ ಪರಿಶೋಧನೆ:
ಜಮೀರ್ ಅವರು ದಾಳಿ ವೇಳೆ ತಮ್ಮ ಆಸ್ತಿ ಪಾಸ್ತಿ ಕುರಿತು ಲೆಕ್ಕಪರಿಶೋಧಕರ ವರದಿಯನ್ನು ಎಸಿಬಿಗೆ ಸಲ್ಲಿಸಿದ್ದು, ಈ ವರದಿ ಕುರಿತು ಸತ್ಯಾಸತ್ಯತೆ ಪರಿಶೀಲನೆಗೆ ಪ್ರತ್ಯೇಕವಾಗಿ ಲೆಕ್ಕಪರಿಶೋಧನೆಗೆ ಎಸಿಬಿ ಕಳುಹಿಸಿದೆ ಎಂದು ಮೂಲಗಳು ಹೇಳಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com