ಕಸ್ಟಮ್ಸ್ ಅಧಿಕಾರಿಗಳ ವೇಷದಲ್ಲಿ ವಂಚನೆ: ದಂಪತಿಗಳ ಬಂಧನ, 34.5 ಲಕ್ಷ ರೂ. ವಶ
ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳಂತೆ ನಟಿಸಿ ಜನರಿಗೆ ವಂಚಿಸಿದ ಆರೋಪದ ಮೇಲೆ ಈಶಾನ್ಯ ವಿಭಾಗದ ಪೊಲೀಸರು ದಂಪತಿಯನ್ನು ಬಂಧಿಸಿ, ಅವರಿಂದ 34.5 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ.
ದರ್ಬಿನ್ ದಾಸ್ ಅಲಿಯಾಸ್ ಮೋಹನ್ ದಾಸ್ (32) ಮತ್ತು ಅವರ ಪತ್ನಿ ಧನುಷ್ಯ ಅಲಿಯಾಸ್ ರೇಚೆಲ್ (31) ಬಂಧಿತರಾಗಿದ್ದಾರೆ.
ದಂಪತಿಗಳು ತಮ್ಮ ಮಗು ಓದುತ್ತಿರುವ ಮಾಂಟೆಸ್ಸರಿಯ ಶಿಕ್ಷಕರು, ನೆಲೆಸಿದ್ದ ಫ್ಲಾಟ್‌ನ ನೆರೆಹೊರೆಯವರು ಮತ್ತು ಇಂದಿರಾನಗರದ ನೇಲ್ ಆರ್ಟ್ ಅಕಾಡೆಮಿಯ ಮಾಲೀಕರು ಮತ್ತು ತರಬೇತುದಾರರು ಸೇರಿದಂತೆ ಹಲವರಿಗೆ ವಂಚಿಸಿದ್ದಾರೆಂದು ತಿಳಿದುಬಂದಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳು ವಶಪಡಿಸಿಕೊಂಡಿರುವ ಅತ್ಯಾಧುನಿಕ ಮೊಬೈಲ್ ಫೋನ್‌ಗಳನ್ನು ಅಗ್ಗದ ದರದಲ್ಲಿ ಪಡೆಯುವುದಾಗಿ ಹಾಗೂ ವಿಮಾನ ನಿಲ್ದಾಣದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ದಂಪತಿಗಳು ಜನರಿಂದ ಹಣ ಪಡೆದು ವಂಚಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಈಶಾನ್ಯ ಪೊಲೀಸರು, ಆರೋಪಿಗಳನ್ನು ಮೊದಲಿಗೆ ಉಡುಪಿಯ ಫ್ಲಾಟ್‌ನಿಂದ ಬಂಧಿಸಿ, ನಂತರ ಮಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಅವರ ಬಾಡಿಗೆ ಫ್ಲಾಟ್‌ಗೆ ಕರೆದೊಯ್ದು ಅವರ ಬಳಿಯಿದ್ದ 106 ಗ್ರಾಂ ಚಿನ್ನಾಭರಣ ಮತ್ತು 34.5 ರೂ ನಗದು ವಶಪಡಿಸಿಕೊಂಡಿದ್ದಾರೆ.
“ತಿಂಡ್ಲು ಮುಖ್ಯರಸ್ತೆಯಲ್ಲಿ ವಾಸವಾಗಿರುವ ಆರ್ಕಿಟೆಕ್ಟ್ ಸೇರಿದಂತೆ ಕೆಲವರಿಂದ ರೂ.68 ಲಕ್ಷ ಪಡೆದು ವಂಚಿಸಿದ್ದಾರೆ. ಮಾಂಟೆಸ್ಸರಿ ಟೀಚರ್‌ಗೆ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆ. ದೇವನಹಳ್ಳಿ ನಿವಾಸಿಯಾದ ಶಿಕ್ಷಕಿಗೆ ಮಾಸಿಕ 1.3 ಲಕ್ಷ ರೂ. ವೇತನ ಸಿಗುವ ಕೆಲಸ ಕೊಡಿಸುವುದಾಗಿ ಹೇಳಿ 96,750 ರೂಪಾಯಿ ವಂಚಿಸಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ