PFI ಮೇಲೆ ದಾಳಿ: ರಾಜ್ಯಾದ್ಯಂತ 70 ಮಂದಿ ವಶಕ್ಕೆ, ಎಲ್ಲೆಲ್ಲಿ.. ಎಷ್ಟೆಷ್ಟು ಮಂದಿ ಪೊಲೀಸ್ ವಶಕ್ಕೆ? ಇಲ್ಲಿದೆ ವಿವರ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ವಿರುದ್ಧದ ಕಾರ್ಯಾಚರಣೆ ಮುಂದುವರೆಸಿರುವ ಕರ್ನಾಟಕ ಪೊಲೀಸರು ಇಂದು ಮುಂಜಾನೆ ತಮ್ಮ 2 ಹಂತದ ದಾಳಿಗಳನ್ನು ನಡೆಸಿದ್ದು, ಈ ವೇಳೆ ರಾಜ್ಯಾದ್ಯಂತ ಸುಮಾರು 70 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. 
ಪಿಎಫ್ಐ ಮೇಲೆ ಪೊಲೀಸ್ ದಾಳಿ
ಪಿಎಫ್ಐ ಮೇಲೆ ಪೊಲೀಸ್ ದಾಳಿ

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ವಿರುದ್ಧದ ಕಾರ್ಯಾಚರಣೆ ಮುಂದುವರೆಸಿರುವ ಕರ್ನಾಟಕ ಪೊಲೀಸರು ಇಂದು ಮುಂಜಾನೆ ತಮ್ಮ 2 ಹಂತದ ದಾಳಿಗಳನ್ನು ನಡೆಸಿದ್ದು, ಈ ವೇಳೆ ರಾಜ್ಯಾದ್ಯಂತ ಸುಮಾರು 70 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. 

ರಾಜ್ಯದ 10 ಜಿಲ್ಲೆಗಳಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಗಳು ಮತ್ತು ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಹಲವರನ್ನು ವಶಕ್ಕೆ ಪಡೆದು, ಕೆಲವರನ್ನು ಬಂಧಿಸಿದ್ದಾರೆ. ಕರ್ನಾಟಕ ಪೊಲೀಸರು ಸೋಮವಾರ ಮಧ್ಯರಾತ್ರಿ ರಾಜ್ಯದಾದ್ಯಂತ 70 ಜನರನ್ನು ತಡೆಗಟ್ಟುವ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಕಳೆದ ವಾರ ಕಾನೂನು ಮತ್ತು ಸುವ್ಯವಸ್ಥೆಗೆ ಕಾರಣವಾದ 15 ಪಿಎಫ್‌ಐ ಸದಸ್ಯರ ಬಂಧನದ ವಿರುದ್ಧ ಪ್ರತಿಭಟಿಸಿದ ಸಮಾಜವಿರೋಧಿ ನಡವಳಿಕೆಯ ಹಿಂದಿನ ಇತಿಹಾಸ ಹೊಂದಿರುವವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. 

ರಾಜ್ಯ ಪೊಲೀಸರು ಕಳೆದ ವಾರ ಬೆಂಗಳೂರು ಮತ್ತು ಮಂಗಳೂರು ನಗರಗಳು, ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ, ಕೊಪ್ಪಳ, ದಾವಣಗೆರೆ, ಉಡುಪಿ, ಮೈಸೂರು ಮತ್ತು ಕಲಬುರಗಿಯಲ್ಲಿ ಪಿಎಫ್‌ಐ ಸದಸ್ಯರ 18 ಸ್ಥಳಗಳ ಮೇಲೆ ದಾಳಿ ನಡೆಸಿ 15 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಕಳೆದ ವಾರ ಎನ್‌ಐಎ ದಾಖಲಿಸಿದ ಐದು ಪ್ರಕರಣಗಳಲ್ಲಿ ಪಿಎಫ್‌ಐ ವಿರುದ್ಧ ದೇಶವ್ಯಾಪಿ ದಾಳಿಯಲ್ಲಿ ಕರ್ನಾಟಕದಿಂದ ಏಳು ಮಂದಿಯನ್ನು ಬಂಧಿಸಿತ್ತು.

ಪಿಎಫ್‌ಐ, ಸಿಪಿಎಫ್‌ ಹಾಗೂ ಎಸ್‌ಡಿಪಿಐ ಮೇಲೆ ಉಗ್ರವಾದ, ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ, ಶಸ್ತ್ರಾಸ್ತ್ರ ತರಬೇತಿ ನೀಡಲು ಶಿಬಿರಗಳ ಆಯೋಜನೆ, ಉಗ್ರವಾದ ಚಟುವಟಿಕೆಗಳಿಗೆ ಪ್ರೆರೇಪಣೆ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು ಸೇರಿದಂತೆ ಹಲವಾರ ಆರೋಪಗಳನ್ನು ಮಾಡಲಾಗಿದೆ.

ಎಲ್ಲೆಲ್ಲಿ.. ಎಷ್ಟೆಷ್ಟು ಮಂದಿ ಪೊಲೀಸ್ ವಶಕ್ಕೆ?
ಪೊಲೀಸ್ ಪ್ರಾಥಮಿಕ ವರದಿಗಳ ಪ್ರಕಾರ ರಾಜ್ಯದ 12 ಜಿಲ್ಲೆಗಳಲ್ಲಿ ದಾಳಿ ಮಾಡಲಾಗಿದೆ. ಬಾಗಲಕೋಟೆ, ಕೋಲಾರ, ಬೆಳಗಾವಿ, ಚಿತ್ರದುರ್ಗ, ಕೊಪ್ಪಳ, ಚಾಮರಾಜನಗರ, ರಾಯಚೂರು, ವಿಜಯಪುರ, ಕಲಬುರ್ಗಿ, ಬೀದರ್‌, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ದಾಳಿ ಮಾಡಿರುವ ಅಧಿಕಾರಿಗಳು ಕೆಲವರನ್ನು ವಶಕ್ಕೆ ಪಡೆದರೆ, ಮತ್ತೆ ಕೆಲವರನ್ನು ಬಂಧಿಸಿದ್ದಾರೆ.  

ವಿಜಯಪುರದಲ್ಲಿ ಅಧ್ಯಕ್ಷನ ಬಂಧನ
ಪಿಎಫ್ಐ ಸಂಘಟನೆಯ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಆಶ್ಫಾಕ್ ಜಮಖಂಡಿ ಮನೆ ಮೇಲೆ ಜಿಲ್ಲಾ ಪೊಲೀಸರು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿ ಬಂಧಿಸಿದ್ದಾರೆ.

ಬಾಗಲಕೋಟೆಯಲ್ಲಿ 7 ಮಂದಿ ವಶಕ್ಕೆ
ಶಾಂತಿ ಕದಡಿದ ಆರೋಪದ‌ ಮೇರೆಗೆ ಜಿಲ್ಲೆಯಲ್ಲಿ ಪಿಎಫ್ಐ ಸಂಘಟನೆ‌‌ಯ 7 ಜನರನ್ನು ಬಂಧಿಸಲಾಗಿದ್ದು, ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಅಸ್ಗರ್ ಅಲಿ, ಇರ್ಫಾನ್, ಮಹಮ್ಮದ್, ರಾಜೇಸಾಬ್, ಮುರ್ತುಜ್, ಉಮರ್ ಫಾರೂಕ್, ಮುಸಾ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಜಯಪ್ರಕಾಶ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ 7 ಮಂದಿ ವಶಕ್ಕೆ
ಬೆಳಗಾವಿಯಲ್ಲೂ ಏಳು ಪಿಎಫ್ಐ ಮುಖಂಡರನ್ನು ಮಂಗಳವಾರ ಬೆಳಗಿನ ಜಾವ ಪೊಲೀಸರು ವಶಕ್ಕೆ ಪಡೆದಿದ್ದು, ಡಿಸಿಪಿ ರವೀಂದ್ರ ಗಡಾದಿ ನೇತೃತ್ವದ ಪೊಲೀಸರ ತಂಡ ಇವರನ್ನು ವಶಕ್ಕೆ ಪಡೆದಿದೆ. ಅಂತೆಯೇ ಚಿತ್ರದುರ್ಗದ ಪಿಎಫ್ಐ ಕಾರ್ಯಕರ್ತ ಆಫನ್ ಅಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಮೊಬೈಲ್ ಸೇರಿ ಇತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬೀದರ್‌ನಲ್ಲಿ ಪಿಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಮ್ ಹಾಗೂ ಎಸ್‌ಡಿಪಿಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶೇಖ್ ಮಕ್ಸೂದ್ ಅವರನ್ನು ಪೊಲೀಸರು ಬಂಧಿಸಿದ್ದು, ಪ್ರತ್ಯೇಕವಾಗಿ ಎರಡು ತಂಡಗಳನ್ನು ರಚಿಸಿ ಬೆಳಗಿನ ಜಾವ ಕಾರ್ಯಾಚರಣೆ ನಡೆಸಲಾಗಿದೆ. ಇತ್ತ ಕಲಬುರಗಿಯಲ್ಲಿ ಪಿಎಫ್ಐ ಜಿಲ್ಲಾ ಮಾಧ್ಯಮ ವಕ್ತಾರ ಎನ್ನಲಾದ ಮಜರ್ ಹುಸೇನ್ ಎಂಬಾತನನ್ನು ಕಲಬುರಗಿ ಪೊಲೀಸರು ಬೆಳಿಗ್ಗೆ ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಎಜಾಜ್ ಅಲಿಯನ್ನು ಬಂಧಿಸಿ ಎನ್ಐಎ ಅಧಿಕಾರಿಗಳು ಕರೆದೊಯ್ದಿದ್ದರು‌.

ಚಾಮರಾಜನಗರದಲ್ಲಿ ಪಿಎಫ್ಐ ಜಿಲ್ಲಾ ಅಧ್ಯಕ್ಷ ಕಫೀಲ್ ಅಹಮದ್ ಹಾಗೂ ಜಿಲ್ಲಾ ಕಾರ್ಯದರ್ಶಿ ಸುಹೇಬ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ತಿಳಿಸಿದ್ದಾರೆ. ಅಂತೆಯೇ ರಾಮನಗರದಲ್ಲಿ 10ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರ ಬಂಧಿಸಲಾಗಿದ್ದು, ಇಲ್ಲಿನ ಐಜೂರು, ಟಿಪ್ಪು ನಗರ, ರೆಹಮಾನಿಯ ನಗರದಲ್ಲಿ ಪೊಲೀಸರು ಮಂಗಳವಾರ ನಸುಕಿನಲ್ಲಿ ದಾಳಿ ನಡೆಸಿ ಪಿಎಫ್ಐ ಸಂಘಟನೆಯ ಹತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಯಾದಗಿರಿ ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಂದೇನವಾಜ ಗೋಗಿ, ಕಾರ್ಯಕರ್ತ ಮಹಮ್ಮದ್ ಹಸೀಮ್ ಪಟೇಲ್ ಗೋಗಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಯಚೂರಿನಲ್ಲಿ ಜಿಲ್ಲಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಇಬ್ಬರು ಪದಾಧಿಕಾರಿಗಳನ್ನುಪೊಲೀಸರು ವಶಕ್ಕೆ ಪಡೆದಿದ್ದು, ಪಿಎಫ್ಐ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಅವರನ್ನು ಸದರ್ ಬಜಾರ್ ಠಾಣೆಯಿಂದ ಹಾಗೂ ಪಿಎಫ್ ಕಾರ್ಯದರ್ಶಿ ಅಸೀಮುದ್ದಿನ್‌ ಅವರನ್ನು ವಶಕ್ಕೆ ಪಡೆಯಲಾಗಿದೆ. ಕೊಪ್ಪಳದಲ್ಲಿ ಸಿಎಫ್ಐ, ಪಿಎಫ್ಐ ಮುಖಂಡರನ್ನು ಪೊಲೀಸರ ವಶಕ್ಕೆ ಪಡೆದಿದ್ದು, ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾದ ಗಂಗಾವತಿ ಮತ್ತು ಕೊಪ್ಪಳದ ಮುಖ್ಯ ಸಂಘಟಕ ರಸೂಲ್ ಮಹಮ್ಮದ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಸರ್ಫರಾಜ್ ಹುಸೇನ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ಕೋಲಾರದಲ್ಲಿ 7 ಮಂದಿ ವಶಕ್ಕೆ
ಇತ್ತ ಕೋಲಾರದಲ್ಲೂ ದಾಳಿ ನಡೆಸಿರುವ ಅಧಿಕಾರಿಗಳು ಒಟ್ಟು 7 ಮಂದಿ ಪಿಎಫ್ಐ ನಾಯಕರನ್ನು ಬಂಧಿಸಿದ್ದು, ಇಲ್ಲಿನ ವಿನಾಯಕನಗರ ನಿವಾಸಿ ಇಮ್ತಿಯಾಜ್ ಅಹಮದ್, ಪಿಎಫ್‌ಐ ಅಧ್ಯಕ್ಷ ಸಿದ್ದಿಕ್ ಪಾಷಾ, ಎಸ್‌ಎಸ್ ಮಖಾನ್ ನಿವಾಸಿ ಸಿದ್ದಿಕ್ ಪಾಷಾ, ಎಸ್ ಎಸ್ ಮಖಾನ್ ನಿವಾಸಿ ವಾಸಿಂ ಪಾಷಾ, ರೆಹಮಂತ್ ನಗರದ ಅಲ್ಲಾ ಬಕಾಶ್, ಮಿಲ್ಲತ್ ನಗರದ ನಿವಾಸಿ ನಯಾಜ್ ಪಾಷಾ ಅವರನ್ನು ಬಂಧಿಸಿದ್ದಾರೆ. ಅಂತೆಯೇ ಶಹನ್ಷಾ ನಗರದ ನಿವಾಸಿ ಶಹಬಾಜ್ ಪಾಷಾ ಮತ್ತು ಶಾಹಿದ್ ನಗರದ ನಿವಾಸಿ ನೂರ್ ಪಾಷಾ ಎಲ್ಲರೂ ಪಿಎಫ್‌ಐ ಕಾರ್ಯಕರ್ತರಾಗಿದ್ದಾರೆ. ಕೋಲಾರದ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಅವರ ನೇರ ಮೇಲ್ವಿಚಾರಣೆಯಲ್ಲಿ ಪೊಲೀಸ್ ಅಧಿಕಾರಿಗಳ ತಂಡವು ಎಲ್ಲರನ್ನೂ ವಶಕ್ಕೆ ಪಡೆದಿದ್ದು, ಐಪಿಸಿ ಕಲಂ ಕಲಂ 107 ರ ಅಡಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯ ಮುಂದೆ ಹಾಜರುಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com